ನವದೆಹಲಿ: ದೆಹಲಿಯಲ್ಲಿ ರೈತರು ಕೈಗೊಂಡಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪು ಕೋಟೆಗೆ ಮುತ್ತಿಗೆ ಹಾಕಲಾಗಿದೆ. ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಸಿಖ್ ಧ್ವಜ ಹಾರಿಸಲಾಗಿದೆ.
ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತರೊಬ್ಬರು ಮೃತಪಟ್ಟಿದ್ದಾರೆ. ಪೊಲೀಸರ ವಿರುದ್ಧವೇ ನಿಹಾನ್ ಸಿಖ್ ಯುವಕರು ಕತ್ತಿ ಝಳಪಿಸಿದ್ದಾರೆ. ಬ್ಯಾರಿಕೇಡ್ ಮುರಿದು ಟ್ರ್ಯಾಕ್ಟರ್ ಒಳನುಗ್ಗಿಸಿದ ರೈತನೊಬ್ಬ ಪೊಲೀಸರ ಮೇಲೆಯೇ ಟ್ರ್ಯಾಕ್ಟರ್ ಹರಿಸಲು ಮುಂದಾಗಿದ್ದಾನೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಗಲಭೆ ನಿಯಂತ್ರಿಸಲು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ.
ಕಳೆದ ಎರಡು ತಿಂಗಳಿಂದ ಟೆಕ್ರಿ, ಸಿಂಘು ಸೇರಿ ದೆಹಲಿ ಗಡಿಭಾಗದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ರೈತರು ಗಣರಾಝ್ಯೋತ್ಸವದ ದಿನ ಟ್ರ್ಯಾಕ್ಟರ್ ರ್ಯಾಲಿ ಕೈಗೊಂಡಿದ್ದು, ಪೊಲೀಸರು ಅನುಮತಿ ನೀಡಿದ್ದ ಮಾರ್ಗದ ಬದಲಿಗೆ ಬೇರೆ ಮಾರ್ಗದಲ್ಲಿ ನುಗ್ಗಿದ್ದ ಕೆಲವರು ಕೆಂಪುಕೋಟೆಗೆ ಲಗ್ಗೆ ಇಟ್ಟಿದ್ದಾರೆ. ಕೆಲವೆಡೆ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಬೃಹತ್ ಹೋರಾಟ ನಡೆದು ಹಿಂಸಾಚಾರಕ್ಕೆ ತಿರುಗಿದೆ.
86 ಪೊಲೀಸರು ನಿನ್ನೆ ನಡೆದ ಘಟನೆಯಲ್ಲಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 15 ಎಫ್ಐಆರ್ ದಾಖಲಿಸಲಾಗಿದೆ. ಪಾಂಡವ ನಗರ್, ಸೀಮಾಪುರಿ, ನದಾಫ್ಗಢ ಘಾಜಿಪುರ, ದ್ವಾರಕ, ಉತ್ತಮ ನಗರ ಠಾಣೆಗಳಲ್ಲಿ ಕೇಸು ದಾಖಲಿಸಲಾಗಿದೆ.
ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಅರೆಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಪಂಜಾಬ್, ಹರಿಯಾಣದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.