ನವದೆಹಲಿ: ದೆಹಲಿಯಲ್ಲಿ ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾದ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ.
ಕೆಂಪುಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ನೇತೃತ್ವ ವಹಿಸಿದ್ದು ಪಂಜಾಬ್ ಚಿತ್ರನಟ ದೀಪ್ ಸಿಧು ಎಂದು ಗುರುತಿಸಲಾಗಿದೆ. ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲಿಗನಾಗಿರುವ ದೀಪ್ ಸಿಧು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದ್ದ. ಸನ್ನಿಡಿಯೋಲ್ ಪರವಾಗಿ ಪ್ರಚಾರ ಮಾಡಿದ್ದ ದೀಪ್ ಸಿಧು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಇರುವ ಫೋಟೋ ಈಗ ವೈರಲ್ ಆಗಿದೆ.
ಸಿಂಘು ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೂಡ ದೀಪ್ ಸಿಧು ಭಾಗಿಯಾಗಿದ್ದ. ಈತನ ನಡವಳಿಕೆ ಬಗ್ಗೆ ಅನುಮಾನಗೊಂಡ ರೈತ ಮುಖಂಡರು ಧರಣಿಯಿಂದ ಹೊರಗಿಟ್ಟಿದ್ದರು. ಈತ ರೈತ ಹೋರಾಟದ ಶತ್ರು ಎಂದು ರೈತ ನಾಯಕರೊಬ್ಬರು ಹೇಳಿದ್ದರು. ಈತನ ವಿರುದ್ಧ ತನಿಖೆ ನಡೆಸಬೇಕೆಂದು ರೈತ ನಾಯಕರು ಆಗ್ರಹಿಸಿದ್ದಾರೆ.
ನಿನ್ನೆ ಕೆಂಪು ಕೋಟೆ ಬಳಿ ನಡೆದ ಘಟನೆ ಹಿಂದೆ ದೀಪ್ ಸಿಂಗ್ ಕೈವಾಡವಿದ್ದು, ತನಿಖೆ ನಡೆಸಬೇಕೆಂದು ರೈತ ನಾಯಕರು ಆಗ್ರಹಿಸಿದ್ದಾರೆ. ನಟ ದೀಪ್ ಸಿಧು ಪ್ರತಿಭಟನಾಕಾರರನ್ನು ಪ್ರಚೋದಿಸಿ, ಅವರನ್ನು ಕೆಂಪು ಕೋಟೆಗೆ ಕರೆದೊಯ್ದರು ಎಂದು ರೈತ ಮುಖಂಡರು ಹೇಳಿದ್ದಾರೆ. ದೀಪ್ ಸಿಧು ಪ್ರತಿಭಟನಾಕಾರರನ್ನು ದಾರಿ ತಪ್ಪಿಸಿ ಅವರನ್ನು ಕೆಂಪು ಕೋಟೆಗೆ ಕರೆದೊಯ್ದಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರೆ, ಕಾಂಗ್ರೆಸ್ ಸಂಸದ ರಾವ್ನೀತ್ ಸಿಂಗ್ ಬಿಟ್ಟು ಅವರು ಡೀಪ್ ಸಿಧು ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸದಸ್ಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.