ಹೈದರಾಬಾದ್: ದಶಕಗಳ ಹಿಂದೆ ಬಿಡುಗಡೆಯಾಗಿದ್ದ ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ.
ಪತ್ನಿ ಬೇರೆಯವರೊಂದಿಗೆ ಇರುವುದನ್ನು ಕಂಡ ಪತಿರಾಯ ಎಲ್ಲ ಮಹಿಳೆಯರೂ ಅದೇ ರೀತಿ ಇರುತ್ತಾರೆ ಎಂದು ಭಾವಿಸಿ ಕೊಲೆ ಮಾಡಿ ವಿಕೃತ ಸಂತೋಷ ಅನುಭವಿಸುತ್ತಾನೆ. ಅದೇ ರೀತಿಯ ಘಟನೆ ಹೈದರಾಬಾದ್ ನ ರಾಚಗೊಂಡದಲ್ಲಿ ನಡೆದಿದೆ.
ಮೈನಾ ರಾಮುಲು ಎಂಬ ವ್ಯಕ್ತಿ 16 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ಹೈದರಾಬಾದ್ ಟಾಸ್ಕ್ ಪೋರ್ಸ್ ಮತ್ತು ರಾಚಕೊಂಡ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸರಣಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಮೈನಾ ರಾಮುಲು ಪತ್ನಿ ಬೇರೆ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದು, ಇದೇ ಸಿಟ್ಟಿನಲ್ಲಿ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಿಕೃತವಾಗಿ ಕೊಲೆ ಮಾಡಿದ್ದಾನೆ. ಮೈನಾ ರಾಮುಲು ವಿರುದ್ಧ ರಾಚಗೊಂಡ, ಸೈಬರಾಬಾದ್, ಮೆದಕ್ ಪೊಲೀಸ್ ಠಾಣೆಯಲ್ಲಿ ಕಳ್ಳತನ, ದರೋಡೆ ಸೇರಿದಂತೆ 21 ಪ್ರಕರಣ ಹಾಗೂ ಒಂದೇ ಕೊಲೆ ಪ್ರಕರಣ ದಾಖಲಾಗಿದ್ದು ಜೀವಾವಧಿ ಶಿಕ್ಷೆಯಾಗಿತ್ತು. ಕಳೆದ ವರ್ಷ ಜುಲೈ 31ರಂದು ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಆರೋಪಿ ತನ್ನ ಕೃತ್ಯ ಮುಂದುವರೆಸಿದ್ದ.
ಮದ್ಯಪಾನ ಮಾಡಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಹಣ ಕೊಟ್ಟು ಮದ್ಯ ಕುಡಿಸಿ ಲೈಂಗಿಕವಾಗಿ ಬಳಸಿಕೊಂಡ ನಂತರ ಕಳುಹಿಸಿದ ಕತ್ತು ಸೀಳಿ ಇಲ್ಲವೇ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡುತ್ತಿದ್ದ. ಅವರ ಬಳಿಯಿದ್ದ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು 16 ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜನ್ ಕುಮಾರ್ ಮಾಹಿತಿ ನೀಡಿದ್ದಾರೆ.