ಬೀದರ್: ಬಿ.ಸಿ.ಪಾಟೀಲ್ ನಂತವರು ಕೃಷಿ ಸಚಿವರಾಗಿರುವುದು ಈ ದೇಶದ ದುರ್ದೈವ. ಮೊದಲು ಅವರು ಸಂವಿಧಾನವನ್ನು ಓದಿಕೊಳ್ಳಲಿ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರತಿಭಟನಾಕಾರರು ಭಯೋತ್ಪಾದಕರು, ಅವರಿಗೆ ಕಾಂಗ್ರೆಸ್ ಬೆಂಬಲವಿದೆ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂವಿಧಾನದ ಬಗ್ಗೆ ಅರಿವಿಲ್ಲದವರು ಇಂಥಹ ಹೇಳಿಕೆ ನೀಡುತ್ತಾರೆ. ಇದು ದುರ್ದೈವ. ಪ್ರತಿಭಟನೆ ನಡೆಸುವುದು ಜನರ ಮೂಲಭೂತ ಹಕ್ಕು, ರೈತರು ತಮ್ಮ ಹೋರಾಟದ ಬಗ್ಗೆ ಮೊದಲೇ ಸೂಚನೆ ನೀಡಿದ್ದರು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸ್ಟೇ ನೀಡಿದೆ. ಆದರೂ ಕೇಂದ್ರ ಸರ್ಕಾರ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಮೀನಾಮೇಷ ಎಣಿಸುತ್ತಿದೆ. ಕಳೆದ ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ ಸರ್ಕಾರ ಅವರ ಬಗ್ಗೆ ಗಮನ ಹರಿಸಿಲ್ಲ. ಸುಮ್ಮನೇ 60 ದಿನಗಳ ಕಾಲ ಪ್ರತಿಭಟನೆ ನಡೆಸಲು ಅವರಿಗೆ ಹುಚ್ಚು ಹಿಡಿದಿದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಅಧಿಕಾರ ನೆತ್ತಿಗೇರಿದೆ. ಇದು ಸರ್ವಾಧಿಕಾರಿಯ ಲಕ್ಷಣ. ರೈತರ ಪ್ರತಿಭಟನೆಗಳನ್ನು ಸೈನ್ಯ ಹಾಗೂ ಪೊಲೀಸ್ ಮೂಲಕ ಹತ್ತಿಕ್ಕುವುದನ್ನು ಜನರು ಸಹಿಸುವುದಿಲ್ಲ. ಬಿಜೆಪಿಯವರಿಗೆ ಇದು ತಿರುಗುಬಾಣವಾಗಲಿದೆ ಎಂದು ಗುಡುಗಿದರು.