ಬೆಂಗಳೂರು: ಬಹುದಿನಗಳ ನಂತರ ಸಚಿವ ಸಂಪುಟ ವಿಸ್ತರಣೆಯಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಕೆಲವು ಸಚಿವರ ಖಾತೆಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಇನ್ನೇನು ಎಲ್ಲವೂ ಸರಿಯಾಯ್ತು ಎಂದುಕೊಂಡಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಅತೃಪ್ತರನ್ನು ಸಮಾಧಾನಪಡಿಸುವುದೇ ಸವಾಲಾಗಿ ಪರಿಣಮಿಸಿದೆ.
ಉತ್ತಮ ಖಾತೆಗೆ ಹಠ ಹಿಡಿದು ಅತೃಪ್ತಿ ಹೊರಹಾಕಿದ್ದ ಕೆಲವು ಸಚಿವರು ತಮಗೆ ಇಂತಹುದೇ ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಹೊಸ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕೆಲವು ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲವೆಂದು ಹೇಳಿದ್ದು, ತಮಗೆ ಇಂತಹುದೇ ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಸಿಎಂಗೆ ಬೇಡಿಕೆ ಇಟ್ಟಿದ್ದಾರೆ. ಕೇಳಿದ ಖಾತೆಯನ್ನು ಕೊಟ್ಟಿಲ್ಲ. ಈಗ ಕೇಳಿದ ಜಿಲ್ಲೆಯ ಉಸ್ತುವಾರಿಯನ್ನಾದ್ರೂ ಕೊಡಿ ಎಂದು ಸಚಿವರು ಸಿಎಂಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.