ಬಳ್ಳಾರಿ: ತನ್ನಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದೇ ಸತಾಯಿಸುತ್ತಿದ್ದ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬೇಸತ್ತ ರೈತ ಮಿನಿ ವಿಧಾನಸೌಧವನ್ನೇ ಮಾರಾಟಕ್ಕೆ ಇಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯಲ್ಲಿ ನಡೆದಿದೆ.
ಮಲ್ಲಪ್ಪ ಬಣಕಾರ್ ಮಿನಿ ವಿಧಾನಸೌಧವನ್ನೇ ಮಾರಾಟಕ್ಕಿಟ್ಟ ರೈತ. 2009ರಲ್ಲಿ ಈ ರೈತನ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು 2013ರಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಿತ್ತು. ಮಲ್ಲಪ್ಪನಿಂದ ಭೂ ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರ ಯಾವುದೇ ಪರಿಹಾರ ನೀಡಿರಲಿಲ್ಲ.
ಕಳೆದ ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡಿ ಬೇಸತ್ತ ರೈತ ಮಲ್ಲಪ್ಪ ಇದೀಗ ತನ್ನ ಜಮೀನಿನಲ್ಲಿರುವ ಮಿನಿ ವಿಧಾನಸೌಧ ಮಾರಾಟಕ್ಕಿರುವುದಾಗಿ ಹೇಳಿ ಕರಪತ್ರ ಹಂಚಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.