ಬೆಂಗಳೂರು: ಮಸಾಜ್ ಹೆಸರಲ್ಲಿ ಗ್ರಾಹಕರನ್ನು ಸೆಳೆದು ಅಶ್ಲೀಲ ಫೋಟೋ ತೆಗೆದು ಹನಿಟ್ರ್ಯಾಪ್ ಮಾಡಿ ಬೆದರಿಸುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಕೆಲ್ ರಾಜ್, ರಘು, ಶಿವಕುಮಾರ್, ತಿಮ್ಮಪ್ಪ, ಹನುಮೇಶ್, ಮನು ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳು ಮಸಾಜ್ ಪಾರ್ಲರ್ ಹೆಸರಲ್ಲಿ ಆನ್ಲೈನಲ್ಲಿ ಜಾಹೀರಾತು ಹಾಕಿದ್ದು, ಯುವತಿಯರ ಫೋಟೋ ಹಾಕಿ ತಮ್ಮ ಮೊಬೈಲ್ ನಂಬರ್ ಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಗ್ರಾಹಕರನ್ನು ಸೆಳೆದು ಮಸಾಜ್ ಮಾಡುವ ವೇಳೆ ಅಶ್ಲೀಲ ಫೋಟೋ ಸೆರೆಹಿಡಿದು ಹನಿಟ್ರ್ಯಾಪ್ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದರು.
ಜನವರಿ 11 ರಂದು ಕನಕಪುರ ರಸ್ತೆಯ 38 ವರ್ಷದ ಯುವಕನನ್ನು ಸೆಳೆದು ಮಸಾಜ್ ಮಾಡುವ ನೆಪದಲ್ಲಿ ಆತನ ಅರಿವಿಗೆ ಬಾರದಂತೆ ಅಶ್ಲೀಲ ಭಂಗಿಯಲ್ಲಿ ಫೋಟೋ ತೆಗೆದಿದ್ದಾರೆ. ಮಸಾಜ್ ಬಳಿಕ ಯುವಕ ಹೊರಡಲು ಮುಂದಾಗುತ್ತಿದ್ದಂತೆ ಅಶ್ಲೀಲ ಫೋಟೋ ತೋರಿಸಿ 4 ಲಕ್ಷ ರುಪಾಯಿ ಕೊಡುವಂತೆ ಬೆದರಿಸಿದ್ದಾರೆ. ಹಣ ಕೊಡದಿದ್ದರೆ ಕುಟುಂಬದವರು ಸ್ನೇಹಿತರಿಗೆ ಫೋಟೋ ಕಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.
ಯುವಕನನ್ನು ಎಟಿಎಂ ಬಳಿ ಕರೆದೊಯ್ದು 50 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದು ಚಿನ್ನದ ಸರ, ಉಂಗುರ ಕಸಿದುಕೊಂಡಿದ್ದಾರೆ. ಕುಮಾರಸ್ವಾಮಿ ಲೇಔಟ್ ನ ಲಾಡ್ಜ್ ಗೆ ಆತನನ್ನು ಕರೆದೊಯ್ದು ಕೂಡಿ ಹಾಕಿದ್ದಾರೆ. ಯುವಕ ತನ್ನ ಸ್ನೇಹಿತನಿಗೆ ಕರೆಮಾಡಿ 1 ಲಕ್ಷ ರೂ. ತರಿಸಿಕೊಂಡಿದ್ದಾನೆ. ಸ್ನೇಹಿತನ ಸಲಹೆ ಮೇರೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳೊಂದಿಗೆ ವೇಶ್ಯೆ ಸೇರಿಕೊಂಡಿದ್ದು, ಆಕೆಗೆ ಹಣ ನೀಡಿ ಗ್ರಾಹಕರಿಗೆ ಗೊತ್ತಾಗದಂತೆ ಅಶ್ಲೀಲ ಫೋಟೋ ತೆಗೆಯುತ್ತಿದ್ದರು. ಆರೋಪಿಗಳ ಬಂಧನವಾಗುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದಾಳೆಂದು ಹೇಳಲಾಗಿದೆ.