ನವದೆಹಲಿ: ಪೆಂಗ್ವಿನ್ ಒಂದರ ಗೊಂದಲ ನೋಡಿ ನೆಟ್ಟಿಗರು ನಕ್ಕು ಸುಸ್ತಾಗಿದ್ದಾರೆ. ಅಂಡ್ರಿಯಾ ಬಾರ್ಲೊ ಎಂಬ ಟ್ವಿಟರ್ ಖಾತೆಯಿಂದ ಜ.11 ರಂದು ಅಪ್ ಲೋಡ್ ಆದ ಪೆಂಗ್ವಿನ್ ವಿಡಿಯೋ ಅಷ್ಟು ವಿಶಿಷ್ಟವಾಗಿದೆ.
ಫಾಕ್ಲ್ಯಾಂಡ್ ದ್ವೀಪದಲ್ಲಿ ತೆಗೆದ 26 ಸೆಕೆಂಡ್ ಗಳ ವಿಡಿಯೋವನ್ನು ಇದುವರೆಗೆ 6.9 ಮಿಲಿಯನ್ ಜನ ವೀಕ್ಷಿಸಿದ್ದಾರೆ. 32.6 ಸಾವಿರ ಜನ ಲೈಕ್ ಮಾಡಿದ್ದಾರೆ. 9878 ಜನ ರೀ ಟ್ವೀಟ್ ಮಾಡಿದ್ದಾರೆ. 200 ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿ ಎಂಟು ಪೆಂಗ್ವಿನ್ ಗಳ ಒಂದು ಗುಂಪು ಬೆಟ್ಟ ಇಳಿದು ಸಮುದ್ರದೆಡೆಗೆ ತೆರಳುತ್ತಿರುತ್ತದೆ. ಹೆಚ್ಚು ಪಕ್ಷಿಗಳಿರುವ ಇನ್ನೊಂದು ಗುಂಪು ಸಮುದ್ರದ ಕಡೆಯಿಂದ ಬೆಟ್ಟ ಹತ್ತುತ್ತಿರುತ್ತದೆ. ಎರಡೂ ಗುಂಪುಗಳು ಎದುರುಬದುರಾಗುತ್ತವೆ. ಒಂದು ಕ್ಷಣ ಅಲ್ಲೇ ನಿಂತು ನಂತರ ಮರು ಪ್ರಯಾಣ ಆರಂಭಿಸುತ್ತವೆ.
ಆದರೆ, ಈ ನಡುವೆ ಸಮುದ್ರದೆಡೆ ಸಾಗುತ್ತಿದ್ದ ಸಣ್ಣ ಗುಂಪಿನ ಪೆಂಗ್ವಿನ್ ಒಂದು ತನ್ನ ಗುಂಪಿನ ಬಗ್ಗೆ ಗೊಂದಲ ಉಂಟಾಗಿ ಎದುರಿನಿಂದ ಬಂದ ಗುಂಪಿನ ಜತೆ ಸೇರಿ ಬೆಟ್ಟದೆಡೆಗೆ ಹೊರಟುಬಿಡುತ್ತದೆ. ಸಣ್ಣ ಗುಂಪಿನಲ್ಲಿದ್ದ ಮತ್ತೊಂದು ಪೆಂಗ್ವಿನ್ ಅದನ್ನು ವಾಪಸ್ ಕರೆತಂದು ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತದೆ. ಪುಟ್ಟ ಪಕ್ಷಿಗೆ ತನ್ನ ಗುಂಪಿನ ಬಗೆಗಿನ ಗೊಂದಲ ನೋಡಿ ನೆಟ್ಟಿಗರು ನಕ್ಕು ನೀರಾಗಿದ್ದಾರೆ.