ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಶ್ರೀಲಂಕಾದ ಬೌಲರ್ ಲಸಿತ್ ಮಾಲಿಂಗ ಫ್ರಾಂಚೈಸಿ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2021 ರ ಆರಂಭದಲ್ಲಿ ಮಾಲಿಂಗ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ತಮ್ಮ ನಿರ್ಧಾರ ತಿಳಿಸಿದ್ದರಂತೆ. ಮುಂದಿನ ಐಪಿಎಲ್ ನಲ್ಲಿ ಆಡುವುದಿಲ್ಲವೆಂಬ ಮಾಹಿತಿ ನೀಡಿದ್ದರಂತೆ.
ಪ್ರತಿ ಫ್ರ್ಯಾಂಚೈಸಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ. ನನ್ನ ಕುಟುಂಬದೊಂದಿಗೆ ಚರ್ಚಿಸಿದ ನಂತರ ನಾನು ಈ ನಿರ್ಧಾರ ಕೈಗೊಂಡಿದ್ದೇನೆಂದು ಮಾಲಿಂಗ ಹೇಳಿದ್ದಾರೆ. ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಪ್ರಯಾಣದ ಕಟ್ಟುನಿಟ್ಟಿನ ನಿಯಮಗಳು ಫ್ರಾಂಚೈಸಿ ಮಾದರಿಯ ಕ್ರಿಕೆಟ್ ಆಡುವುದನ್ನು ತಡೆಯಲು ಮುಖ್ಯ ಕಾರಣವಾಗಿದೆ. ಆದ್ದರಿಂದ ಈ ಸಮಯದಲ್ಲಿ ಇದು ಸರಿಯಾದ ನಿರ್ಧಾರವಾಗಿದೆ ಎಂದು ಮಾಲಿಂಗ ಹೇಳಿದ್ದಾರೆ.
ಈ ಬಗ್ಗೆ ಮುಂಬೈ ಇಂಡಿಯನ್ಸ್ ಜೊತೆ ಮಾತನಾಡಿದ್ದೇನೆ. ಅವರು ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು, ಅರ್ಥಮಾಡಿಕೊಂಡ್ರು. ಐಪಿಎಲ್ ಆಡಲು ಅವಕಾಶ ನೀಡಿದ ಅಂಬಾನಿ ಕುಟುಂಬಕ್ಕೆ, ಫ್ರ್ಯಾಂಚೈಸಿಯ ಎಲ್ಲಾ ಸದಸ್ಯರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆಂದು ಮಾಲಿಂಗ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಲಸಿತ್ ಮಾಲಿಂಗ ಅವರ ನಿರ್ಧಾರವನ್ನು ತಂಡದ ಆಡಳಿತವು ಗೌರವಿಸುತ್ತದೆ ಎಂದಿದ್ದಾರೆ. ಮಾಲಿಂಗ ಇನ್ನು ಐದು ವರ್ಷಗಳ ಕಾಲ ತಂಡದ ಭಾಗವಾಗಿರಲಿ ಎಂದು ನಾವು ಬಯಸಿದ್ದೆವು. ಅವರು ತಂಡದ ದಂತಕಥೆ. ಯಾವಾಗ್ಲೂ ನಮ್ಮ ಹಾಗೂ ಮುಂಬೈ ಅಭಿಮಾನಿಗಳ ಹೃದಯದಲ್ಲಿರುತ್ತಾರೆಂದು ಆಕಾಶ್ ಅಂಬಾನಿ ಹೇಳಿದ್ದಾರೆ.