ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಕರ್ತವ್ಯನಿರತ ಪೊಲೀಸ್ ಮಹಿಳಾ ಪೊಲೀಸ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಸೌಮ್ಯ ರೆಡ್ಡಿ ಅವರು ಪ್ರತಿಭಟನೆಯ ಹೆಸರಲ್ಲಿ ಮಹಿಳಾ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ. ಶಾಸಕಿಯಾಗಿ, ಹೆಣ್ಣುಮಗಳಾಗಿ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಬೇಕು. ಅದನ್ನು ಬಿಟ್ಟು ಇನ್ನೊಬ್ಬ ಹೆಣ್ಣುಮಗಳ ಮೇಲೆ ಕೈ ಮಾಡುವುದು ಸರಿಯೇ? ದುಡಿದು ಬಾಳುವುದು ಮಹಿಳಾ ಸಬಲೀಕರಣವೋ? ಹೊಡೆದು ಬಾಳುವುದೋ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆ ಇರುವುದು ಸರ್ಕಾರದ ವಿರುದ್ಧ. ಆದರೆ ಮಹಿಳಾ ಪೊಲೀಸರ ಮೇಲೇಕೆ ದರ್ಪ ತೋರಿಸುತ್ತೀರಿ? ಹಲ್ಲೆ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿಯೇ? ಜನತೆಗೆ ನಿಮ್ಮಂತೆ ಬಾಳುವ ಹಕ್ಕಿಲ್ಲವೇ? ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ, ಜನಪರತೆ ಎಂಬುದು ಬಾಯಿ ಮಾತಿಗಷ್ಟೇ ಎನ್ನುವುದು ಸೀಮಿತವಾಗಿದ್ದು, ಪ್ರತಿಭಟನೆ ಹೆಸರಿನಲ್ಲಿ ಶಾಸಕಿ ಸೌಮ್ಯ ರೆಡ್ಡಿ ಅವರು ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕೂಡಲೇ ಅವರು ಮಹಿಳಾ ಪೊಲೀಸರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.