ಬ್ರಿಸ್ಬೇನ್ ಟೆಸ್ಟ್ ನಲ್ಲಿ ಐತಿಹಾಸಿಕ ಜಯ ದಾಖಲಿಸಲು ನೆರವಾದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 13 ನೇ ಸ್ಥಾನಕ್ಕೇರಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಜೇಯ 89 ರನ್ ಗಳಿಸಿದ ಪಂತ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ 13ನೇ ಸ್ಥಾನ ಗಳಿಸಿದ್ದಾರೆ. ಪಂತ್, ವಿಕೆಟ್ ಕೀಪರ್ ಬ್ಯಾಟ್ಸ್ ಮನ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಅವರ ನಂತರ ದಕ್ಷಿಣ ಆಫ್ರಿಕಾದ ನಾಯಕ ಕ್ವಿಂಟನ್ ಡಿ ಕಾಕ್ 15 ನೇ ಸ್ಥಾನದಲ್ಲಿದ್ದಾರೆ.
ಗಬಾ ಮೈದಾನದಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಮಾರ್ನಸ್ ಲಾಬುಶೇನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಮಾರ್ನಸ್ ಲಾಬುಶೇನ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ನಂತರ ಪಿತೃತ್ವ ರಜೆಗಾಗಿ ಭಾರತಕ್ಕೆ ಮರಳಿದ್ದರು. ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ.
ಬ್ಯಾಟ್ಸ್ ಮನ್‌ಗಳ ಅಗ್ರ ಹತ್ತು ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ ಚೇತೇಶ್ವರ ಪೂಜಾರ ಏಳನೇ ಮತ್ತು ಅಜಿಂಕ್ಯ ರಹಾನೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅದ್ಭುತ 56 ರನ್ ಗಳಿಸಿದ ಪೂಜಾರಾ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ 91 ರನ್ ಗಳಿಸಿದ ಯುವ ಬ್ಯಾಟ್ಸ್ ಮನ್ ಶುಬ್ಮನ್ ಗಿಲ್ ಶ್ರೇಯಾಂಕದಲ್ಲಿ 21ನೇ ಸ್ಥಾನದಲ್ಲಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ನಿಂದ ಹೊರಗಿದ್ದ ಬೌಲರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರಿತ್ ಬುಮ್ರಾ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಇಬ್ಬರೂ ಬೌಲರ್‌ಗಳು ಕ್ರಮವಾಗಿ 8 ಮತ್ತು 9 ನೇ ಸ್ಥಾನದಲ್ಲಿದ್ದಾರೆ.