ಪ್ರತಿನಿತ್ಯವೂ ಖರ್ಜೂರದ ಮರಗಳನ್ನು ಏರುವ ತೆಲಂಗಾಣದ ಈ ಮಹಿಳೆ ನೀರಾ ಸಂಗ್ರಹಿಸುವ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ.
ಮೇಡಕ್ ಜಿಲ್ಲೆಯ ರೆಗೋಡೆ ಗ್ರಾಮದ ಸಾವಿತ್ರಿ ಎಂಬ 33 ವರ್ಷದ ಈ ಮಹಿಳೆ ಖರ್ಜೂರದ ಮರಗಳನ್ನು ಬಲು ಬೇಗನೇ ಹತ್ತುವ ತಮ್ಮ ಸಾಮರ್ಥ್ಯದ ಮೂಲಕ ಎಲ್ಲರನ್ನೂ ಚಕಿತಗೊಳಿಸುತ್ತಾರೆ.
2016ರಲ್ಲಿ ತಮ್ಮ ಪತಿ ತೀರಿಕೊಂಡ ಬಳಿಕ ಸಾವಿತ್ರ ನೀರಾ ಸಂಗ್ರಹಣೆ ಮಾಡುವ ವೃತ್ತಿ ಆಯ್ದುಕೊಂಡಿದ್ದು, ಫೀನಿಕ್ಸ್ ಖರ್ಜೂರದ ಮರಗಳನ್ನು ದಿನನಿತ್ಯ ಏರುವ ಮೂಲಕ ತಮ್ಮ ಕಟುಂಬದ ಅಗತ್ಯಗಳನ್ನು ಪೂರೈಸುತ್ತಿದ್ದಾರೆ.
ತಮ್ಮ ಎರಡನೇ ಮಗುವಿಗೆ ಗರ್ಭ ಧರಿಸಿದ್ದ ವೇಳೆ ಸಾವಿತ್ರಿ ಅವರ ಪತಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಷ್ಟು ಸಾಲದೆಂಬಂತೆ ಅವರ ಎರಡನೇ ಮಗುವಿಗೆ ವಿಶೇಷ ಅಗತ್ಯಗಳನ್ನು ಪೂರೈಸಬೇಕಾದ ಹೆಚ್ಚುವರಿ ಹೊರೆ ಸಾವಿತ್ರಿ ಅವರ ಮೇಲೆ ಬಿದ್ದಿದೆ.
ಹತ್ತನೇ ತರಗತಿವರೆಗೂ ವ್ಯಾಸಾಂಗ ಮಾಡಿರುವ ಸಾವಿತ್ರಿಗೆ ಇತರೆ ಉದ್ಯೋಗಾವಕಾಶಗಳು ಸಿಕ್ಕರೂ ಸಹ ಅವೆಲ್ಲವನ್ನೂ ತಿರಸ್ಕರಿಸಿರುವ ಅವರು, ತನ್ನ ಪತಿಯ ಹಾದಿಯನ್ನೇ ತುಳಿಯುವ ಮೂಲಕ ನೀರಾ ಸಂಗ್ರಹಣೆಯ ವೃತ್ತಿ ಆಯ್ದುಕೊಂಡಿದ್ದಾರೆ.
ಪ್ರತಿನಿತ್ಯ 30 ಮರಗಳನ್ನು ಏರುವ ಸಾವಿತ್ರಿ ಏನಿಲ್ಲವೆಂದರೂ 10 ಕಿಮೀ ನಡೆದು ನೀರಾ ಸಂಗ್ರಹಣೆ ಮಾಡುತ್ತಾರೆ.