ಕೊರೊನಾ ಕಾರಣಕ್ಕೆ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಸಹ ಸಂಚಾರ ಬಂದ್ ಮಾಡಿದ್ದವು. ಲಾಕ್ಡೌನ್ ತೆರವಿನ ಬಳಿಕ ಬಸ್ ಸಂಚಾರ ಆರಂಭವಾಗಿದ್ದರೂ ಸಹ ಸಮೂಹ ಸಾರಿಗೆಯಲ್ಲಿ ಸಂಚಾರ ಮಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆ.ಎಸ್.ಆರ್.ಟಿ.ಸಿ. ನಷ್ಟದ ಹಾದಿಯಲ್ಲಿದೆ.
ಕೊರೊನಾದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಬರೋಬ್ಬರಿ ನಾಲ್ಕು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದ್ದು, ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ದಾವಣಗೆರೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ನಿಗಮ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಸಚಿವರು ಹೇಳಿದ್ದು, ಇದರ ಮಧ್ಯೆಯೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.
ನಿಗಮ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ ನೌಕರರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿರುವ ಸಚಿವ ಲಕ್ಷ್ಮಣ ಸವದಿ, ಹೆಚ್ಚು ಮೈಲೇಜ್ ನಿರ್ವಹಣೆ ಮಾಡುವ ಚಾಲಕರಿಗೆ 11 ಗ್ರಾಂ ತೂಕದ ಚಿನ್ನದ ಪದಕ ನೀಡಿ ಗೌರವಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.