ಬಳ್ಳಾರಿ: ಕೊರೋನಾ ಲಸಿಕೆಯ ಆರಂಭದ ದಿನವೇ ಲಸಿಕೆ ಪಡೆದುಕೊಂಡಿದ್ದ ಬಳ್ಳಾರಿ ಜಿಲ್ಲೆ ಸಂಡೂರು ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರ ಸೋಮವಾರ ಕರ್ತವ್ಯದ ವೇಳೆಯಲ್ಲೇ ಮೃತಪಟ್ಟಿದ್ದಾರೆ. ಆದರೆ, ಅವರ ಸಾವು ಲಸಿಕೆಯಿಂದ ಸಂಭವಿಸಿಲ್ಲ. ಹೃದಯಾಘಾತದಿಂದ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ 30 ಸಾವಿರ ಜನರಿಗೆ ಲಸಿಕೆ ನೀಡಲಾಗಿದ್ದು, ಯಾರೊಬ್ಬರಿಗೂ ಯಾವುದೇ ಸಮಸ್ಯೆಯಾಗಿಲ್ಲ. ಸಂಡೂರು ಆಸ್ಪತ್ರೆ ನೌಕರರ ನಾಗರಾಜ್ ಅವರು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ಧನ ಅವರು ಕೂಡ ಸ್ಪಷ್ಟನೆ ನೀಡಿ, ಲಸಿಕೆಯಿಂದ ನಾಗರಾಜ್ ಮೃತಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಹೊಸಪೇಟೆ ತಾಲೂಕಿನ ಕಮಲಾಪುರ ವಾಸಿಯಾಗಿರುವ ನಾಗರಾಜ್ ಶನಿವಾರ ಲಸಿಕೆ ಪಡೆದಿದ್ದು, ಸೋಮವಾರ ಬೆಳಿಗ್ಗೆ 11:30 ರ ಸುಮಾರಿಗೆ ಹೃದಯಾಘಾತದಿಂದ ಕರ್ತವ್ಯದ ವೇಳೆಯಲ್ಲಿ ಮೃತಪಟ್ಟಿದ್ದರು.