ಮದುವೆ ಜೀವನದ ಒಂದು ಭಾಗ. ಎರಡು ಜೀವಗಳ ಜೊತೆ ಎರಡು ಕುಟುಂಬಗಳನ್ನು ಒಂದು ಮಾಡುವ ಶಕ್ತಿ ಇದಕ್ಕಿದೆ. ಅಪರಿಚಿತರ ಜೊತೆ ಸಂಬಂಧ ಬೆಳೆಸುವುದು ಸುಲುಭದ ಕೆಲಸವಲ್ಲ. ಹಿಂದೆ ಮದುವೆಯಾಗುವವರೆಗೂ ಪರಸ್ಪರ ಮುಖ ನೋಡಿಕೊಳ್ತಿರಲಿಲ್ಲವಂತೆ. ಆದ್ರೆ ಈಗ ಹಾಗಲ್ಲ. ಎಂಗೇಜ್ಮೆಂಟ್ ಆಗುವ ಮೊದಲು ಒಬ್ಬರ ಬಗ್ಗೆ ಒಬ್ಬರು ತಿಳಿದಿರ್ತಾರೆ.
ಕೆಲವೊಮ್ಮೆ ಎಂಗೇಜ್ಮೆಂಟ್ ಆದ ಮೇಲೆ ಹುಡುಗ-ಹುಡುಗಿ ನಡೆದುಕೊಳ್ಳುವ, ಮಾತನಾಡುವ ರೀತಿ ಮುಂದಿನ ಜೀವನಕ್ಕೆ ಅಡ್ಡಗಾಲಾಗುವ ಸಾಧ್ಯತೆ ಇದೆ. ಎಂಗೇಜ್ಮೆಂಟ್ ಆದ ಮೇಲೆ ಹುಡುಗ –ಹುಡುಗಿ ತಮ್ಮ ಎಲ್ಲ ವಿಚಾರಗಳನ್ನೂ ಹಂಚಿಕೊಳ್ಳಬೇಕೆಂದೇನಿಲ್ಲ. ಕೆಲವೊಂದು ವಿಚಾರಗಳನ್ನು ಮುಚ್ಚಿಡುವುದು ಒಳಿತು.
ಜಾತಕ ಕೂಡಿ ಬಂದಿದೆ ಅಂದ್ರೆ ನಿಮ್ಮ ಆಸೆ-ಇಚ್ಛೆಗಳು ಒಂದೇ ಇರಬೇಕೆಂದೇನಿಲ್ಲ. ಹಾಗಾಗಿ ನಿಮ್ಮ ಸಂಗಾತಿ ಜೊತೆ ಮಾತನಾಡುವಾಗ ಗಮನವಿರಲಿ. ಅವರಿಗೆ ನಮ್ಮಿಬ್ಬರ ಆಸೆ-ಇಷ್ಟಗಳು ಬೇರೆ ಬೇರೆ. ಹೊಂದಾಣಿಕೆ ಅಸಾಧ್ಯ ಎನ್ನಿಸುವಂತ ಭಾವನೆ ಬರದಂತೆ ನೋಡಿಕೊಳ್ಳಿ.
ಮದುವೆಗಿಂತ ಮೊದಲು ಒಬ್ಬರನ್ನೊಬ್ಬರು ಅರಿಯುವ ಅವಶ್ಯಕತೆ ಇದೆ. ಆದ್ರೆ ವೈಯಕ್ತಿಕ ವಿಷಯಗಳನ್ನು ಹೇಳುವಾಗ ಎಚ್ಚರವಿರಲಿ. ನಿಮ್ಮ ವೈಯಕ್ತಿಕ ವಿಚಾರವನ್ನು ಅವರಿಗೆ ಹೇಳುವುದು ಹಾಗೂ ಅವರ ವೈಯಕ್ತಿಕ ವಿಚಾರವನ್ನು ನೀವು ಕೇಳುವುದಕ್ಕೆ ಹೋಗಬೇಡಿ.
ಹಳೆಯ ಸಂಬಂಧದ ಬಗ್ಗೆ ಕೆದಕಬೇಡಿ. ಇದೇ ವಿಚಾರ ಸಂಬಂಧ ಹಾಳುಮಾಡಬಹುದು. ಹಾಗೆ ಜಗಳಕ್ಕೆ ಕಾರಣವಾಗಬಹುದು.
ಎಂಗೇಜ್ಮೆಂಟ್ ನಂತ್ರ ಎರಡು ಕುಟುಂಬಗಳು ಹತ್ತಿರವಾಗ್ತವೆ. ಆದ್ರೆ ಮದುವೆಯ ನಂತ್ರವೇ ಒಂದಾಗ್ತಾರೆ. ಹಾಗಾಗಿ ಮದುವೆಗೂ ಮೊದಲು ತಂದೆ-ತಾಯಿ, ಅಣ್ಣ-ಅಕ್ಕನ ಕೆಲವು ವಿಚಾರಗಳನ್ನು ಸಂಗಾತಿಗೆ ಹೇಳದಿರುವುದು ಒಳ್ಳೆಯದು.