ಬೆಂಗಳೂರು: ಬೆಳಗಾವಿ ಕರ್ನಾಟಕ ಆಕ್ರಮಿತ ಪ್ರದೇಶವಾಗಿದ್ದು, ಇದನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂಬ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಹಾ ಸಿಎಂ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದೆ. ಈ ನಡುವೆ ಉದ್ಧವ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಉದ್ಧವ್ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ ಎಂದು ತಿರುಗೇಟು ನೀಡಿದ್ದಾರೆ.
ಉದ್ಧವ ಠಾಕ್ರೆ ಒಂದು ಬಾರಿ ಇತಿಹಾಸವನ್ನು ಅವಲೋಕಿಸಿದರೆ, ಈಗ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದೂ ಗೊತ್ತಾಗುತ್ತದೆ. ಯಾರು ಯಾರ ಪ್ರದೇಶವನ್ನು ಬಿಟ್ಟುಕೊಡಬೇಕೆಂಬುದೂ ತಿಳಿಯುತ್ತದೆ ಎಂದು ಸರಣಿ ಟ್ವೀಟ್ ಮೂಲಕ ಗುಡುಗಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ನೆಟ್ಟಿದ್ದ ಕನ್ನಡ ಧ್ವಜ ತೆರವು ಮಾಡಬೇಕು ಎಂದು ವಾದಿಸಿದ್ದ ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ. ಎಂಇಎಸ್ ಅನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವವರಿಂದ ಪ್ರೇರಣೆ ಪಡೆದೇ ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಿದ್ದಾರೆ. ಗಡಿ ವಿವಾದದಲ್ಲಿ ಮಹಾಜನ ಆಯೋಗದ ತೀರ್ಪೇ ಅಂತಿಮ. ಇತ್ಯರ್ಥ ಆಗಿರುವ ವಿಷಯಗಳ ಬಗ್ಗೆ ತಗಾದೆ ತೆಗೆದು, ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿರುವವರಲ್ಲಿ ವಿಷ ಬೀಜ ಬಿತ್ತುವುದನ್ನು ದೇಶದ್ರೋಹಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.