ಬೆಂಗಳೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಜನರಿಗೆ ಡಿಜಿಟಲ್ ವೇದಿಕೆ ಸೃಷ್ಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ತಂತ್ರಜ್ಞಾನದ ಮೂಲಕ ಜನರ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕೇಂದ್ರದ MyGov.in ಮಾದರಿಯ ವೇದಿಕೆ, ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಜನ ಸಕ್ರಿಯವಾಗಿ ಭಾಗವಹಿಸುವುದನ್ನು ಉತ್ತೇಜಿಸಲು ಡಿಜಿಟಲ್ ವೇದಿಕೆ ರೂಪಿಸಲಾಗಿದೆ.
ಆನ್ಲೈನ್ನಲ್ಲಿ ಅಥವಾ ಖುದ್ದಾಗಿ ಹಾಜರಾಗಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಗುಂಪು ಚರ್ಚೆ ನಡೆಯಲಿದೆ. ಸಾರ್ವಜನಿಕರಿಂದ ಹೊಸ ಪ್ರಸ್ತಾಪ, ಸಲಹೆ, ಜನಾಭಿಪ್ರಾಯ ಪಡೆಯಲಾಗುತ್ತದೆ. ಇಲಾಖೆಯ ಸಚಿವರು, ಅಧಿಕಾರಿಗಳಿಂದ ನೇರ ಸಮಾಲೋಚನೆ ಇರುತ್ತದೆ. ಸಾರ್ವಜನಿಕರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.