ಪ್ರಖ್ಯಾತ ಬೈಕರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕ್ರಾಸ್-ಕಂಟ್ರಿ ರೈಡ್‌ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಒಂಟೆಗೆ ಗುದ್ದಿ ಮೃತಪಟ್ಟಿದ್ದಾರೆ.
ರಿಚರ್ಡ್ ಐದು ಖಂಡಗಳ 37 ದೇಶಗಳಿಗೆ ಭೇಟಿ ಕೊಟ್ಟಿದ್ದು, ತಮ್ಮ ಬೈಕ್‌ನಲ್ಲಿ 65 ಸಾವಿರ ಕಿಮೀ ದೂರ ಕ್ರಮಿಸಿದ್ದಾರೆ. ಬೆಂಗಳೂರಿನಿಂದ 8000 ಕಿಮೀ ಬೈಕ್ ರೈಡ್‌ನಲ್ಲಿ ಭಾಗಿಯಾಗಿದ್ದರು. ತಮ್ಮ ಮೂವರು ಗೆಳೆಯರೊಂದಿಗೆ ತಮ್ಮ ಬಿಎಂಡಬ್ಲ್ಯು ಜಿಎಸ್ ಬೈಕ್‌ನಲ್ಲಿ ಜೈಸಲ್ಮೇರ್‌ನತ್ತ ತೆರಳಿದ್ದರು. ಬುಧವಾರ ರಾತ್ರಿ ಇಲ್ಲಿನ ಫತೇಗಡ ಉಪ-ವಿಭಾಗದ ಬಳಿ ಹೋಗುತ್ತಿದ್ದ ವೇಳೆ ದಿಢೀರ್ ಎಂದು ಅಡ್ಡ ಬಂದ ಒಂಟೆಗೆ ಗುದ್ದಿದ ರಿಚರ್ಡ್ ತಮ್ಮ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಹಳ್ಳಕ್ಕೆ ಬಿದ್ದು ತಲೆಗೆ ಮಾರಣಾಂತಿಕ ಗಾಯ ಮಾಡಿಕೊಂಡಿದ್ದರು.
ರಿಚರ್ಡ್ ಜೊತೆಯಲ್ಲಿ ಬೆಂಗಳೂರಿನ ನಾರಾಯಣ್ ಮತ್ತು ಡಾ. ವಿಜಯ್ ಹಾಗೂ ಚೆನ್ನೈನ ವೇಣುಗೋಪಾಲ್ ಇದ್ದರು. ಇವರ ಈ ಸುದೀರ್ಘ ರ‍್ಯಾಲಿ ಜನವರಿ 23ರಂದು ಅಂತ್ಯವಾಗಬೇಕಿತ್ತು. 45 ವರ್ಷದ ಈ ಬೈಕರ್ ತಮ್ಮ ಮಡದಿ ಹಾಗೂ ಇಬ್ಬರು ಮಕ್ಕಳು ಮತ್ತು ಹೆತ್ತವರನ್ನು ಅಗಲಿದ್ದಾರೆ.
2018ರಲ್ಲಿ ಬೆಂಗಳೂರಿನಿಂದ ಲಂಡನ್‌ಗೆ ಬೈಕ್‌ನಲ್ಲಿ ತೆರಳಿದ್ದ ರಿಚರ್ಡ್, 2019ರಲ್ಲಿ ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳನ್ನು ಹಾದು ಬಂದಿದ್ದರು. ಏಷ್ಯಾ, ಯೂರೋಪ್ ಹಾಗೂ ಆಸ್ಟ್ರೇಲಿಯಾ ಖಂಡಗಳನ್ನು ಸಹ ತಮ್ಮ ಬೈಕ್‌ನಲ್ಲಿ ಸುತ್ತಿ ಬಂದಿದ್ದಾರೆ ರಿಚರ್ಡ್.