ಹಾವೇರಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಆರಂಭವಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಿಂದ ಪಾದಯಾತ್ರೆ ಆರಂಭವಾಗಿದ್ದು, ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗಿದೆ. ಯಾತ್ರೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಕೆ.ಎಸ್. ಈಶ್ವರಪ್ಪ, ಕೆ.ಇ. ಕಾಂತೇಶ್, ಎಂ. ಶ್ರೀಕಾಂತ್ ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದಾರೆ.
ಯಾತ್ರೆಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಭಕ್ತ ಕನಕದಾಸರಿಗೆ ಶ್ರೀಕೃಷ್ಣ ಪರಮಾತ್ಮನೇ ಬಗ್ಗಿದ. ಇನ್ನೂ ಕನಕದಾಸರಿಗೆ ಪ್ರಧಾನಿ ಮೋದಿ ಬಗ್ಗದೇ ಇರುತ್ತಾರೆಯೇ ಎಂದು ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಕನಕದಾಸರಿಗೆ ಹೋಲಿಸಿದ್ದಾರೆ.
ದೇವಲೋಕಕ್ಕೆ ಹೋದರೂ ದೇವರು ಸಿಗುವುದಿಲ್ಲ. ಆದರೆ, ನಮಗೆ ಈ ವೇದಿಕೆಯ ಮೇಲೆ ದೇವರು ಸಿಕ್ಕಿದ್ದಾರೆ. ನಾವು ಈ ವಿಚಾರದಲ್ಲಿ ರಾಜಕೀಯ ಯೋಚನೆ ಮಾಡಿದರೆ ಭಕ್ತ ಕನಕದಾಸರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅಷ್ಟು ದೂರ ಪಾದಯಾತ್ರೆ ಬೇಡ ಎಂದು ನಾನು ಹೇಳಿದ್ದೆ. ಆದರೆ, ಸ್ವಾಮೀಜಿ ಪಾದಯಾತ್ರೆ ಮಾಡುತ್ತೇನೆಂದು ಹೊರಟಿದ್ದಾರೆ. ಈಗಾಗಲೇ ಬಿ.ಎಲ್. ಸಂತೋಷ್ ಅವರೊಂದಿಗೆ ಮಾತನಾಡಿದ್ದೇವೆ. ಅಮಿತ್ ಶಾ, ಮೋದಿ ಜೊತೆಗೂ ಚರ್ಚೆ ಮಾಡಿ ಒಪ್ಪಿಸೋಣ. ಕುರುಬರಿಗೆ ಎಸ್ಟಿ ಮೀಸಲಾತಿ ಸಿಗುವವರೆಗೆ ಹೋರಾಟ ನಡೆಸಲಾಗುವುದು. ಎಸ್ಟಿ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಈಶ್ವರಪ್ಪ ತಿಳಿಸಿದ್ದಾರೆ.