ಗಾಳಿಪಟವನ್ನು ಹಿಡಿಯಲು ಹೋದ 10 ವರ್ಷದ ಬಾಲಕನೊಬ್ಬ ಸಗಣಿ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನ ಕಾಂಡಿವಲಿಯಲ್ಲಿ ಜರುಗಿದೆ.
ಸಂಕ್ರಾಂತಿಯ ಸಿರಿಯಲ್ಲಿ ಗಾಳಿಪಟ ಹಿಡಿಯಲು ಹೊರಟ ಪೋರ ದೃವೇಶ್ ಜಾಧವ್, ಐದನೇ ತರಗತಿಯಲ್ಲಿ ಓದುತ್ತಿದ್ದ. ಜಾಧವ್ ಮನೆಯ ಬಳಿ ಹಸುಗಳ ಶೆಡ್ ಇದ್ದು, ಅವುಗಳ ಸಗಣಿಯನ್ನು ದೊಡ್ಡ ಗುಂಡಿಯೊಂದರಲ್ಲಿ ಸಂಗ್ರಹಿಸಿ ಇಡಲಾಗಿತ್ತು.
ತಾನು ಹಾರಿಸುತ್ತಿದ್ದ ಗಾಳಿಪಟವು ಸಗಣಿ ಗುಡ್ಡೆ ಮೇಲೆ ಬಿದ್ದಿದ್ದನ್ನು ಕಂಡ ಜಾಧವ್, ಅದನ್ನು ಎತ್ತಿಕೊಳ್ಳಲು ಹೋಗಿ ಗುಂಡಿಗೆ ಬಿದ್ದಿದ್ದಾನೆ. ಕೂಡಲೇ ಸಹಾಯಕ್ಕಾಗಿ ಕಿರುಚಿದ ಬಾಲಕನ ದನಿಯನ್ನು ಅಲ್ಲಿದ್ದ ಜನರು ಕೇಳಿಸಿಕೊಂಡರೂ ಸಹ ಯಾರಿಗೂ ಆ ಗುಂಡಿಗೆ ಇಳಿಯುವ ಧೈರ್ಯ ಇರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಅಲ್ಲಿಗೆ ಬರುವಷ್ಟರಲ್ಲಿ ಬಾಲಕ ಸಂಪೂರ್ಣ ಮುಳುಗಿ ಹೋಗಿದ್ದ. ಆತನನ್ನು ಹೇಗೋ ಅಲ್ಲಿಂದ ಎತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತನ ಜೀವ ಉಳಿದಿರಲಿಲ್ಲ.