ಕೊರೊನಾದಿಂದಾಗಿ ಅನೇಕರು ಮನೆಯಲ್ಲಿ ಬಂಧಿಯಾಗಿದ್ದಾರೆ. ತುರ್ತು ಕೆಲಸಕ್ಕೆ ಮಾತ್ರ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಕಳೆದ 9 ತಿಂಗಳಿಂದ ಮನೆಯಲ್ಲಿರುವ ಜನರು ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೊಳಗಾಗ್ತಿದ್ದಾರೆ. ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಜನರ ದೈಹಿಕ ಚಟುವಟಿಕೆ ಬಗ್ಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಡಬ್ಲ್ಯೂಎಚ್ ಒ ಮಾರ್ಗಸೂಚಿ ಪ್ರಕಾರ ಪ್ರತಿ ದಿನ ನೀವು ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ದೇಹವನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿಡಲು ವ್ಯಾಯಾಮ ಬಹಳ ಮುಖ್ಯ. ಪ್ರತಿ ದಿನ ಪ್ರತಿ ವ್ಯಕ್ತಿ ವ್ಯಾಯಾಮ ಮಾಡಿದ್ರೆ ಪ್ರತಿ ವರ್ಷ ಆಗುವ ಶೇಕಡಾ 40-50ರಷ್ಟು ಸಾವನ್ನು ತಡೆಯಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಪ್ರತಿ ದಿನ ವ್ಯಾಯಾಮ ಮಾಡುವುದ್ರಿಂದ ಅನೇಕ ರೋಗಗಳನ್ನು ದೂರವಿಡಬಹುದು. ಹೃದಯರೋಗ, ಮಧುಮೇಹದಂತಹ ಗಂಭೀರ ಖಾಯಿಲೆಗಳನ್ನು ತಡೆಯಬಹುದು. ದೈಹಿಕ ಚಟುವಟಿಕೆ ಆತಂಕ, ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪ್ರತಿ ವಾರ 150ರಿಂದ 300 ನಿಮಿಷ ಏರೋಬಿಕ್ಸ್ ನಂತಹ ಚಟುವಟಿಕೆ ಮಾಡಬೇಕು. ಮಕ್ಕಳು ದಿನದಲ್ಲಿ 60 ನಿಮಿಷ ಏರೋಬಿಕ್ಸ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದೈಹಿಕ ಚಟುವಟಿಕೆ ಅಂದ್ರೆ ಕೇವಲ ವ್ಯಾಯಾಮವಲ್ಲ. ಬೆವರು ಬರುವ ಯಾವುದೇ ಕೆಲಸವನ್ನು ನೀವು ಮಾಡಬಹುದು. ಸೈಕ್ಲಿಂಗ್, ವಾಕಿಂಗ್, ಓಟ, ನೃತ್ಯ ಹೀಗೆ ಅನೇಕ ವಿಧಾನಗಳ ಮೂಲಕ ನಿಮ್ಮ ದೇಹವನ್ನು ದಣಿಸಬಹುದು.
ಒಂದೇ ಜಾಗದಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವ, ದೈಹಿಕ ವ್ಯಾಯಾಮ ಮಾಡದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವವರಿಗೆ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳು ಬಹುಬೇಗ ಬರುತ್ತವೆ. ಅನಿವಾರ್ಯವಾದಲ್ಲಿ ದಿನಕ್ಕೆ ನಿಗದಿತ ಸಮಯವನ್ನು ದೈಹಿಕ ಚಟುವಟಿಕೆಗೆ ಮೀಸಲಿಡಬೇಕು. ಆರೋಗ್ಯ ಬಯಸುವವರು ದೈಹಿಕ ಚಟುವಟಿಕೆಗೆ ಹೆಚ್ಚು ಮಾನ್ಯತೆ ನೀಡಬೇಕು.ಒಂದೇ ಕಡೆ ಕುಳಿತುಕೊಳ್ಳಬಾರದು. ಇದು ವೃದ್ಧರಿಗೂ ಅನ್ವಯಿಸುತ್ತದೆ. ಅವರು ದೈಹಿಕ ಚಟುವಟಿಕೆಯಲ್ಲಿ ನಿರತರಾದ್ರೆ ಆರೋಗ್ಯದಿಂದಿರುತ್ತಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.