ತನ್ನ ಬಳಕೆದಾರರಿಗೆ ಹೊಸ ಷರತ್ತುಗಳನ್ನು ವಿಧಿಸಲು ಹೊರಟ ವಾಟ್ಸಾಪ್ ವಿರುದ್ಧ ನೆಟ್ಟಿಗರ ಅಸಮಾಧಾನ ದೊಡ್ಡದಾಗಿದ್ದು, ಅವರೆಲ್ಲ ಈಗ ಹೊಸ ಮೆಸೇಜಿಂಗ್ ಕಿರು ತಂತ್ರಾಂಶ ಸಿಗ್ನಲ್ನತ್ತ ವಾಲುತ್ತಿದ್ದಾರೆ. ಇದಾದ ಬಳಿಕ ತನ್ನ ಪ್ಲಾಟ್ಫಾರಂಗೆ ಸೈನ್ ಅಪ್ ಆಗುತ್ತಿರುವ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಸಿಗ್ನಲ್ ಕಾಣುತ್ತಿದೆ.
ಖಾಸಗಿತನ ಸಂಬಂಧ ತನ್ನ ಹೊಸ ನೀತಿಗಳಿಗೆ ಅನುಮತಿ ಕೊಟ್ಟಲ್ಲಿ ಮಾತ್ರವೇ ತನ್ನ ಸೇವೆಗಳನ್ನು ಅನುಭವಿಸಲು ಸಾಧ್ಯ ಎಂದು ಹೇಳಿರುವ ವಾಟ್ಸಾಪ್, ಇಲ್ಲವಾದಲ್ಲಿ ತನ್ನ ಕಿರುತಂತ್ರಾಂಶವನ್ನು ಫೆಬ್ರವರಿ 8ರಿಂದ ಡಿಲೀಟ್ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಟಾಟಾ ಸಮೂಹದ ಎನ್. ಚಂದ್ರಶೇಖರನ್ ಕೆಲ ಕಾಲದಿಂದ ಸಿಗ್ನಲ್ ಅನ್ನು ಬಳಸುತ್ತಿದ್ದಾರೆ. ಟಾಟಾ ಸಮೂಹದ ಹಿರಿಯ ನಾಯಕತ್ವ ಸಿಗ್ನಲ್ನತ್ತ ಧಾವಿಸಿದೆ ಎಂದು ತಿಳಿದು ಬಂದಿದೆ.
ಮಹಿಂದ್ರಾ ಅಂಡ್ ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸಹ ಇದೇ ಕಿರು ತಂತ್ರಾಂಶವನ್ನು ಬಳಸುತ್ತಿದ್ದಾರೆ ಎಂದು ಸಹ ವರದಿಗಳು ಹೇಳಿವೆ. ಪೇಟಿಯಂ, ಫೋನ್-ಪೇ, ಕ್ರೆಡ್ ಸಂಸ್ಥೆಗಳ ಸ್ಥಾಪಕರೂ ಸಹ ಈ ಕಿರುತಂತ್ರಾಂಶ ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟೆಸ್ಲಾ ಹಾಗೂ ಸ್ಪೇಸ್ಎಕ್ಸ್ ಸಮೂಹದ ಸಿಇಓ ಎಲಾನ್ ಮಸ್ಕ್ ತಮ್ಮ ಟ್ವಿಟ್ ಮೂಲಕ, ವಾಟ್ಸಾಪ್ ಬದಲಿಗೆ ಸಿಗ್ನಲ್ ಬಳಸಿ ಎಂದು ತಮ್ಮ 41.5 ದಶಲಕ್ಷ ಅನುಯಾಯಿಗಳಿಗೆ ಕೋರಿಕೊಂಡ ಬಳಿಕ ಸಿಗ್ನಲ್ ಜನಪ್ರಿಯತೆ ದೊಡ್ಡ ಮಟ್ಟ ತಲುಪಿದೆ.