ಪದೇ ಪದೇ ತಮ್ಮ ವಿವಾದದ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಭೋಪಾಲದ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಇದೀಗ ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಪರವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ.
2008ರ ಮಲೇಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಆಪಾದಿತರಾಗಿರುವ ಠಾಕೂರ್, ಕಾಂಗ್ರೆಸ್ ಯಾವಾಗಲೂ ದೇಶಭಕ್ತರನ್ನು ಅಮವಾನಿಸುತ್ತಲೇ ಬಂದಿದೆ ಎಂದಿದ್ದಾರೆ. ಗೋಡ್ಸೆ ದೇಶದ ಮೊದಲ ಭಯೋತ್ಪಾದಕ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ ಬಳಿಕ ಸಾಧ್ವಿಯ ಈ ಮಾತು ಕೇಳಿ ಬಂದಿದೆ.
“ಕಾಂಗ್ರೆಸ್ ಯಾವಾಗಲೂ ದೇಶಭಕ್ತರನ್ನು ಅವಹೇಳನ ಮಾಡುತ್ತಲೇ ಬಂದಿದ್ದು, ಅವರನ್ನು ಕೇಸರಿ ಭಯೋತ್ಪಾದಕರು ಎನ್ನುತ್ತಲೇ ಬಂದಿದೆ. ಇದಕ್ಕಿಂತ ವಿಷಮಯವಾದದ್ದು ಬೇರೊಂದಿಲ್ಲ ಹಾಗೂ ನಾನು ಈ ಬಗ್ಗೆ ಹೆಚ್ಚಾಗಿ ಏನನ್ನೂ ಹೇಳಲು ಬಯಸುವುದಿಲ್ಲ” ಎಂದು ಠಾಕೂರ್ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ವೇಳೆಯಲ್ಲೂ ಸಹ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಸಾಧ್ವಿ ಭಾರೀ ವಿವಾದ ಮೈಮೇಲೆ ಎಳೆದುಕೊಂಡಿದ್ದರು.