ಬೆಂಗಳೂರು: ಸಂಪುಟಕ್ಕೆ 7 ಸಚಿವರು ಸೇರ್ಪಡೆಯಾಗಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹೆಚ್. ವಿಶ್ವನಾಥ್, ಯತ್ನಾಳ್, ಅಭಯ ಪಾಟೀಲ್ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀವ್ರ ಅಸಮಾಧಾನವಿದೆ ಎಂದಿರುವ ಶಾಸಕ ಅರವಿಂದ ಬೆಲ್ಲದ್, ಒತ್ತಡ ಹೇರುವವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2008ರಲ್ಲಿ ಕೂಡ ಯಡಿಯೂರಪ್ಪನವರು ಯಾರು ಒತ್ತಡ ಹೇರುತ್ತಾರೆ ಅವರಿಗೆ ಸ್ಥಾನ ನೀಡುತ್ತಿದ್ದರು. ಈಗಲೂ ಕೂಡ ಅದೇ ರೀತಿಯಲ್ಲಿ ಮಂತ್ರಿ ಮಂಡಲ ವಿಸ್ತರಿಸುತ್ತಿದ್ದಾರೆ. ಇಂದು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರಿಗೆ, ಯುವಕರಿಗೆ ಅನ್ಯಾಯವಾಗಿದೆ. ಈ ಹಿಂದೆ ನಾನು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಸಚಿವ ಸ್ಥಾನ ನೀಡಿಲ್ಲ. ಈ ಬೆಳವಣಿಗೆ ಬಗ್ಗೆ ನಾನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.