ಅಕ್ರಮ ಕಟ್ಟಡ ನಿರ್ಮಾಣ ಆರೋಪದಡಿಯಲ್ಲಿ ಬಾಲಿವುಡ್ ನಟ ಸೋನು ಸೂದ್ ಬಿಎಂಸಿ ವಿರುದ್ಧ ಮುಂಬೈ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಇದೀಗ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ರನ್ನ ಅವರ ಮುಂಬೈನ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯ ಹಿಂದಿನ ಸ್ಪಷ್ಟ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಅನುಮತಿಯಿಲ್ಲದೇ ಶಕ್ತಿ ಸಾಗರ್ ವಸತಿ ಕಟ್ಟಡವನ್ನ ಹೋಟೆಲ್ ಆಗಿ ಪರಿವರ್ತಿಸಿದ ಆರೋಪದ ಅಡಿಯಲ್ಲಿ ಸೋನು ಸೂದ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೋರಿ ಬಿಎಂಸಿ ದೂರು ಸಲ್ಲಿಸಿದೆ.
ಜುಹುದಲ್ಲಿ ಈಗಾಗಲೇ 2 ಬಾರಿ ತೆರವು ಕಾರ್ಯಾಚರಣೆ ನಡೆಸಿದ್ದರೂ ಸಹ ಸೋನು ಸೂದ್ ಮತ್ತೆ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿಸಿದ್ದಾರೆ ಎಂದು ದೂರಿರುವ ಬಿಎಂಸಿ ಮುಂಬೈ ಹೈಕೋರ್ಟ್ಗೆ ಅಫಿಢವಿಟ್ ಸಲ್ಲಿಸಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಸೋನು ಸೂದ್ ವಿರುದ್ಧ ಬಿಎಂಸಿ ನೋಟಿಸ್ ನೀಡಿತ್ತು. ಈ ನೋಟಿಸ್ ಪ್ರಶ್ನಿಸಿ ಸೋನು ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಾದರೂ ಡಿಸೆಂಬರ್ನಲ್ಲಿ ಈ ಅರ್ಜಿ ವಜಾಗೊಂಡಿತ್ತು. ಇದನ್ನ ಪ್ರಶ್ನಿಸಿ ಸೋನು ಸೂದ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋನು ಸೂದ್ರ ಈ ಅರ್ಜಿ ಸಂಬಂಧ ಮುಂಬೈ ಹೈಕೋರ್ಟ್ ಅಫಿಡವಿಟ್ ಸಲ್ಲಿಸಿತ್ತು.