ಕಪ್ಪು ಹಣ ಹೊಂದಿರುವವರು ಹಾಗೂ ಬೇನಾಮಿ ಆಸ್ತಿ ಹೊಂದಿದವರನ್ನು ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇಲಾಖೆ ವತಿಯಿಂದ ನೂತನ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಪ್ಪು ಹಣ ಹೊಂದಿದವರ ಮಾಹಿತಿ ಇರುವ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ತಾವು ಹೊಂದಿರುವ ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಸೋಮವಾರದಂದು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ https://www.incometaxindiaefiling.gov.in/ ನಲ್ಲಿ ನೂತನ ವ್ಯವಸ್ಥೆ ಸೇರ್ಪಡೆ ಮಾಡಲಾಗಿದ್ದು, ಮಾಹಿತಿದಾರರು ಈ ವೆಬ್ ಸೈಟ್ ಗೆ ಭೇಟಿ ನೀಡಿ ‘Submit Tax Evasion Petition or Benami Property holding’ ಲಿಂಕ್ ಕ್ಲಿಕ್ ಮಾಡುವ ಮೂಲಕ ತಾವು ಹೊಂದಿರುವ ಮಾಹಿತಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಕಪ್ಪು ಹಣ ಹಾಗೂ ಬೇನಾಮಿ ಆಸ್ತಿ ಹೊಂದಿರುವವರ ಮಾಹಿತಿಯನ್ನು ಪಾನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಿರುವ ಸಾರ್ವಜನಿಕರು ಮಾತ್ರವಲ್ಲದೆ ಇವುಗಳು ಇಲ್ಲದೆ ಇರುವವರೂ ಸಹ ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ ಮಾಹಿತಿದಾರರು ತಮ್ಮ ದೂರಿಗೆ ಸಂಬಂಧಪಟ್ಟ ಕ್ರಮಗಳನ್ನೂ ಸಹ ಇಲ್ಲಿ ಪಡೆಯಬಹುದಾಗಿದೆ.
ಮಾಹಿತಿ ಆಧರಿಸಿ ಆದಾಯ ತೆರಿಗೆ ಇಲಾಖೆ 1 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿಗಳವರೆಗೆ ಬಹುಮಾನವಾಗಿ ನೀಡಲಿದೆ. ಬೇನಾಮಿ ಆಸ್ತಿ ಮಾಹಿತಿ ನೀಡಿದವರಿಗೆ 1 ಕೋಟಿ ರೂಪಾಯಿ ಹಾಗೂ ತೆರಿಗೆ ವಂಚನೆ ಮತ್ತು ವಿದೇಶದಲ್ಲಿ ಆಸ್ತಿ ಹೊಂದಿರುವ ಪ್ರಕರಣಗಳ ಮಾಹಿತಿದಾರರಿಗೆ 5 ಕೋಟಿ ರೂಪಾಯಿವರೆಗೆ ಬಹುಮಾನ ಸಿಗಲಿದೆ ಎನ್ನಲಾಗಿದೆ.