ನವದೆಹಲಿ: ತಾಪಮಾನ ಕುಸಿಯತೊಡಗಿದ್ದು, ಮುಂದಿನ ನಾಲ್ಕು ದಿನಗಳವರೆಗೆ ಶೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೋಲ್ಡ್ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಂಪಾದ ಗಾಳಿಯ ಮುನ್ಸೂಚನೆಯೊಂದಿಗೆ ಉತ್ತರ ಭಾರತದ ಬಯಲು ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಇದೇ ವೇಳೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶುಷ್ಕ ಉತ್ತರ/ ವಾಯುವ್ಯ ಮಾರುತಗಳ ಹರಡುವಿಕೆಯಿಂದಾಗಿ ಮುಂದಿನ ನಾಲ್ಕೈದು ದಿನಗಳಲ್ಲಿ ವಾಯುವ್ಯ ಭಾರತದ ಹೆಚ್ಚಿನ ಪ್ರದೇಶದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ಕೆಲವು ಭಾಗದಲ್ಲಿ ಶೀತ, ತೀವ್ರ ಶೀತ ವಾತಾವರಣ ಇರಲಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಪ್ರದೇಶ, ಉತ್ತರಾಖಂಡ್ ಭಾಗದಲ್ಲಿ ಕೋಲ್ಡ್ ವೇವ್ ಅಲರ್ಟ್ ನೀಡಲಾಗಿದೆ. ಈ ಅವಧಿಯಲ್ಲಿ ದಟ್ಟವಾದ ಮಂಜು ಆವರಿಸುತ್ತದೆ. ಜನವರಿ 13 ರಿಂದ 16 ರವರೆಗೆ ಪಂಜಾಬ್ ಹರಿಯಾಣ ಉತ್ತರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಲಕ್ಷದ್ವೀಪಗಳಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಗುಡುಗು ಸಿಡಿಲು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.