ಚಿತ್ರದುರ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆ ಪ್ರದೇಶಗಳಿಗೆ ಕಂದಾಯ ಸಚಿವರಾದ ಆರ್.ಅಶೋಕ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಬಬ್ಬೂರು ಹಾಗೂ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ, ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆಯನ್ನು ಸಚಿವರು ವೀಕ್ಷಿಸಿ ರೈತರ ಸಂಕಷ್ಟ ಆಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕಾಲಿಕವಾಗಿ ಬಿದ್ದ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆ ಹಾನಿಗೀಡಾಗಿದೆ. ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬೆಳೆ ನಷ್ಟ ಅನುಭವಿಸಿದ ನೊಂದ ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಜಿಲ್ಲೆಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿಶೇಷವಾಗಿ ಕಡಲೆ ಬೆಳೆ ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಡಲೆ ಬೆಳೆ ಹೆಚ್ಚಿನ ಮಳೆಯಿಂದಾಗಿ ಫಸಲು ಸಂಪೂರ್ಣವಾಗಿ ಗುಣಮಟ್ಟವನ್ನು ಕಳೆದುಕೊಂಡಿದೆ. ಇದರ ಜೊತೆಗೆ ಈರುಳ್ಳಿ ಬೆಳೆಯು ಸಹ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿದೆ. ಚಿತ್ರದುರ್ಗ, ಹಾವೇರಿ, ಧಾರವಾಡ, ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಹಾಗಾಗಿ ರೈತರಿಗೆ ಪರಿಹಾರವನ್ನು ಕೊಡಿಸುವ ದೃಷ್ಠಿಯಿಂದ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಕಾಲಿಕ ಮಳೆಯಿಂದಾಗಿ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದ ಅಂಕಿ-ಅಂಶಗಳೊಂದಿಗೆ ಮಾಹಿತಿ ಸಲ್ಲಿಸಿಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಹಾನಿಗೀಡಾದ ಕಡಲೆ ಕಾಳು ಬೆಳೆಗೆ ಸೂಕ್ತ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷತೆ ಶಶಿಕಲಾ ಸುರೇಶ್ಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ಉಪನಿರ್ದೇಶಕರಾದ ಪ್ರಭಾಕರ್, ಹುಲಿರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸವಿತಾ, ಹಿರಿಯೂರು ತಾಲ್ಲೂಕು ತಹಶೀಲ್ದಾರ್ ಸತ್ಯನಾರಾಯಣ, ಚಿತ್ರದುರ್ಗ ತಹಶೀಲ್ದಾರ್ ವೆಂಕಟೇಶಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.