ಸಿಡ್ನಿಯಲ್ಲಿ ನಡೆಯುತ್ತಿರುವ 3 ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್ 97 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
3 ರನ್ ಗಳ ಅಂತರದಲ್ಲಿ ಶತಕ ವಂಚಿತರಾಗಿರುವ ಅವರು ಚೇತೇಶ್ವರ ಪೂಜಾರ ಅವರೊಂದಿಗೆ 148 ರನ್ ಗಳ ಜೊತೆಯಾಟ ಆಡಿದ್ದಾರೆ. ಶತಕ ತಪ್ಪಿಸಿಕೊಂಡ ರಿಷಬ್ ಪಂತ್ ಮಹತ್ವದ ದಾಖಲೆ ಬರೆದಿದ್ದಾರೆ. ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್ ನಲ್ಲಿ ಎರಡನೇ ಗರಿಷ್ಠ ರನ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
2018 ರಲ್ಲಿ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧ 114 ರನ್ ಗಳಿಸಿದ್ದರು. ಇಂದು 97 ರನ್ ಗಳಿಸಿದ್ದಾರೆ. 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಎಂ.ಎಸ್. ಧೋನಿ ಅಜೇಯ 76 ರನ್ ಗಳಿಸಿದ್ದು ಮೂರನೇ ಗರಿಷ್ಠ ರನ್ ಗಳಿಕೆಯಾಗಿದೆ. 2016/17 ರಲ್ಲಿ ಪಾರ್ಥಿವ್ ಪಟೇಲ್ ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ 67 ರನ್ ಗಳಿಸಿದ್ದಾರೆ.