ಕಾನ್ಪುರ: ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ ದುಬೆ ತಾಯಿ ಸರಳಾ ದೇವಿ ಈಗ ಮಗನ ದುಷ್ಟ ಕಾರ್ಯದ ಬಗ್ಗೆ ಜನರ ಕ್ಷಮೆ ಕೋರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನರಮೇಧ ನಡೆದ ಬಿಕ್ರು ಗ್ರಾಮಕ್ಕೆ ಬುಧವಾರ ತೆರಳಿದ ಸರಳಾ ದೇವಿ, ‘ಆತನನ್ನು ಹಡೆದ ಬಗ್ಗೆ ನನಗೆ ಬೇಸರವಿದೆ. ವಿಕಾಸನ ಕಾರಣದಿಂದ ಯಾರ‍್ಯಾರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೋ ಅವರೆಲ್ಲರಲ್ಲಿಯೂ ನಾನು ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.
ವಿಕಾಸ ದುಬೆ ಪೂರ್ವಜರ ಗ್ರಾಮ ಬಿಕ್ರುದಲ್ಲಿ ಜುಲೈ 2 ರಂದು ಪೊಲೀಸರು ಹಾಗೂ ಗ್ಯಾಂಗ್‌ಸ್ಟರ್‌ಗಳ ನಡುವೆ ಕಾಳಗ ನಡೆದಿತ್ತು. 8 ಪೊಲೀಸರು ಮೃತಪಟ್ಟಿದ್ದರು. ನಂತರ ವಿಕಾಸ ದುಬೆಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಅದೇ ನರಮೇಧದಲ್ಲಿ ಭಾಗಿಯಾಗಿ ಪೊಲೀಸರಿಗೆ ಶರಣಾಗಿರುವ ಉಮಾ ಶಂಕರ ಮನೆಗೆ ಸರಳಾ ದೇವಿ ಭೇಟಿ ನೀಡಿದರು. ನಂತರ ತಮ್ಮ ಹಳೆಯ ಮನೆಗೆ ತೆರಳಿ ಪರಿಶೀಲಿಸಿದರು.
ಸರಳಾ ದೇವಿ ಉಮಾಶಂಕರ ಮನೆಗೆ ಆಗಮಿಸುತ್ತಿದ್ದ ಸುದ್ದಿ ಕೇಳಿ ಪೊಲೀಸ್ ತುಕಡಿಯೊಂದನ್ನು ಊರಿಗೆ ಕಳಿಸಲಾಗಿತ್ತು. ಸರಳಾ ದೇವಿ ಏನು ಮಾಡುತ್ತಿದ್ದಾಳೆ ಎಂಬ ಬಗ್ಗೆ ಪೊಲೀಸರು ಕೆಲವರನ್ನು ವಿಚಾರಣೆ ನಡೆಸಿದರು. ಆದರೆ, ಬಿಕ್ರು ಗ್ರಾಮದ ಜನ ಆಕೆಯನ್ನು ನಿರ್ಲಕ್ಷಿಸಿದ್ದಾಗಿ ಮಾಹಿತಿ ನೀಡಿದ್ದಾರೆ.