ನಾಗ್ಪುರ್: ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯ ವೇಳೆ ಕುತ್ತಿಗೆಗೆ ಹಗ್ಗ ಕಟ್ಟಿದ್ದರಿಂದ ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರ್ ದಲ್ಲಿ ನಡೆದಿದೆ.
ನಾಗ್ಪುರದ ಖಪರ್ಖೇಡ ಪ್ರದೇಶದ ಲಾಡ್ಜ್ ನಲ್ಲಿ ಶುಕ್ರವಾರ ದುರಂತ ಘಟನೆ ನಡೆದಿದೆ. 5 ವರ್ಷಗಳ ಹಿಂದೆ ಮದುವೆಯಾಗಿ ಮಗು ಹೊಂದಿರುವ 30 ವರ್ಷದ ವ್ಯಕ್ತಿಗೆ ಮಹಿಳೆಯೊಬ್ಬಳ ಜೊತೆಗೆ ಅಕ್ರಮ ಸಂಬಂಧ ಬೆಳೆದಿದೆ.
ಇಬ್ಬರು ಒಟ್ಟಿಗೆ ಸಮಯ ಕಳೆಯಲು ಗುರುವಾರ ರಾತ್ರಿ ಲಾಡ್ಜ್ ಗೆ ಬಂದಿದ್ದಾರೆ. ಮಹಿಳೆ ಲೈಂಗಿಕ ಕ್ರಿಯೆ ಸಮಯದಲ್ಲಿ ಕುರ್ಚಿಗೆ ವ್ಯಕ್ತಿಯನ್ನು ನೈಲಾನ್ ಹಗ್ಗದಿಂದ ಕಟ್ಟಿ ಲೈಂಗಿಕ ಪ್ರಚೋದನೆ ಹೆಚ್ಚಿಸಲು ಮುಂದಾಗಿದ್ದಾಳೆ. ಮತ್ತೊಂದು ಹಗ್ಗವನ್ನು ಆತನ ಕುತ್ತಿಗೆ ಬಿಗಿದಿದ್ದಾಳೆ.
ಇದಾದ ನಂತರ ಆಕೆ ವಾಶ್ರೂಮ್ ಗೆ ಹೋಗಿ ಬರುವಷ್ಟರಲ್ಲಿ ಪ್ರಿಯಕರ ಕುಳಿತುಕೊಂಡಿದ್ದ ಕುರ್ಚಿ ಬಿದ್ದಿದೆ. ಇದರ ಪರಿಣಾಮ ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ವಾಶ್ ರೂಮ್ ನಿಂದ ಬಂದ ಮಹಿಳೆ ಪ್ರಿಯಕರ ಚಲನರಹಿತವಾಗಿ ಮಲಗಿರುವುದನ್ನು ಗಮನಿಸಿ ನೆರವಿಗಾಗಿ ಲಾಡ್ಜ್ ನ ಸಿಬ್ಬಂದಿಗೆ ಕರೆ ಮಾಡಿದ್ದಾಳೆ.
ಕೂಡಲೇ ಧಾವಿಸಿ ಬಂದ ರೂಮ್ ಬಾಯ್ ಗಳು ಕುರ್ಚಿಗೆ ಕಟ್ಟಿದ್ದ ಹಗ್ಗದಿಂದ ವ್ಯಕ್ತಿಯನ್ನು ಬಿಚ್ಚಿದ್ದಾರೆ.. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಮೃತ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಲಾಡ್ಜ್ ನ ಮ್ಯಾನೇಜರ್, ರೂಮ್ ಬಾಯ್, ಸಿಬ್ಬಂದಿ ಹೇಳಿಕೆಯನ್ನು ಪಡೆಯಲಾಗಿದೆ. ಮಹಿಳೆ ಮತ್ತು ಮೃತವ್ಯಕ್ತಿಯ ಸೆಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಪರ್ಖೇಡ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.