2018ರಲ್ಲಿ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಈರೋಡ್ ಮಹಿಳಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನ ವಿಧಿಸಿದೆ.
ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಸಹಾಯದಿಂದ 15 ವರ್ಷದ ಬಾಲಕಿಯೊಂದಿಗೆ ಆರೋಪಿ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯನ್ನ ಮದುವೆಯಾಗುತ್ತೇನೆ ಎಂದು ನಂಬಿಸಿ ವಯಸ್ಕ ಮಹಿಳೆಯ ಸಹಾಯದಿಂದ ಅಪ್ರಾಪ್ತೆಯನ್ನ ಚಿತ್ತೂರಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ.
ಘಟನೆ ಬೆಳಕಿಗೆ ಬಂದ ಬಳಿಕ ಬಾಲಕಿ ಪೋಷಕರು ಆತನ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಅಲ್ಲದೇ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಸೂಕ್ತ ವಿಚಾರಣೆ ಬಳಿಕ ಅಪರಾಧಕ್ಕೆ ಸಾಥ್ ನೀಡಿದ ಆರೋಪದಡಿಯಲ್ಲಿ ಆಕೆಗೆ 3 ವರ್ಷಗಳ ಶಿಕ್ಷೆ ನೀಡಲಾಗಿದೆ.
ಆರೋಪಿಗೆ ಮಹಿಳಾ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಮಹಿಳಾ ನ್ಯಾಯಾಲಯದ ನ್ಯಾಯಾಧೀಶೆ ಮಾಲತಿ ಶಿಕ್ಷೆ ಪ್ರತಿಯನ್ನ ಹಸ್ತಾಂತರಿಸಿದ್ರು.