ಕಾಲ ಎಷ್ಟೇ ಮುಂದುವರಿದಿದ್ರೂ ಸಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡೋ ಕೆಟ್ಟ ಮನಸ್ಥಿತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಒಂಟಿ ರಸ್ತೆಯಲ್ಲಿ ಮಹಿಳೆಯರನ್ನ ಹಿಂಬಾಲಿಸೋದು, ಬಸ್ನಲ್ಲಿ ಮೈ ಮುಟ್ಟಿ ಕಿರುಕುಳ ನೀಡೋದು ಹೀಗೆ ಎಷ್ಟೋ ಘಟನೆಗಳು ನಿತ್ಯ ನಡೀತಾನೇ ಇರುತ್ತೆ. ಆದರೆ ಮರ್ಯಾದೆಗೆ ಅಂಜಿ ಹೆಣ್ಮಕ್ಕಳು ಇದನ್ನ ಬಹಿರಂಗ ಮಾಡೋಕೆ ಹೋಗಲ್ಲ.
ಆದರೆ ಕೊಲ್ಕತ್ತಾದ ಯುವತಿಯೊಬ್ಬಳು ತನ್ನನ್ನ ಚುಡಾಯಿಸಿದ ಕಿಡಿಗೇಡಿಗೆ ಚಳಿ ಬಿಡಿಸಿದ್ದಾಳೆ. ಬಸ್ನಲ್ಲಿ ಆಕೆಯ ಒಪ್ಪಿಗೆ ಇಲ್ಲದೇ ಫೋಟೋಗಳನ್ನ ತೆಗೆದುಕೊಳ್ತಿದ್ದ ಕಿಡಿಗೇಡಿಯನ್ನ ಸಾರ್ವಜನಿಕ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡು ಆತನ ಎದುರೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಪೊಲೀಸರು ಬರುವವರೆಗೆ ಆತ ಸ್ಥಳದಿಂದ ಕದಲದಂತೆ ನೋಡಿಕೊಂಡ ಯುವತಿ ಆತನ ವಿರುದ್ಧ ವಾಗ್ವಾದ ನಡೆಸುತ್ತಲೇ ಇದ್ದಳು.
ಕಿಡಿಗೇಡಿಯೊಬ್ಬ ಯುವತಿಯ ಫೋಟೋವನ್ನ ಕ್ಲಿಕ್ಕಿಸುತ್ತಲೇ ಇದ್ದ. ಇದನ್ನ ಗಮನಿಸಿದ ಯುವತಿ ಆತ ಕುಳಿತಿದ್ದ ಸೀಟ್ ಬಳಿಯೇ ಹೋಗಿ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಆತ ಇಲ್ಲ ನಾನು ಸೆಲ್ಫಿ ತೆಗೆದುಕೊಳ್ತಿದ್ದೆ ಅಂತಾ ಸಬೂಬು ಹೇಳೋಕೆ ಮುಂದಾಗಿದ್ದಾನೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಆಕೆ ಆತನ ಫೋನ್ನ್ನ ಕಸಿದು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ ತನ್ನ ಫೋನಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.