ಮೀರತ್: ಕಳೆದ ಮೂರು ತಲೆಮಾರಿನಿಂದ 67 ವರ್ಷದಿಂದ ಆಗ್ರಾದ ತ್ರಿಲೋಕಿನಿ ಕುಟುಂಬ ಠಾಕೂರ್ ಫುಟ್ ವೇರ್ ಕಂಪನಿ ಹೆಸರಿನಲ್ಲಿ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಇತ್ತೀಚೆಗೆ ಅದೇ ಹೆಸರು ಆ ಕುಟುಂಬಕ್ಕೆ ಕಂಟಕವಾಗಿದ್ದು, ಕಂಪನಿ ವಿರುದ್ಧ ಟ್ವಿಟರ್ ನಲ್ಲಿ ಅಭಿಯಾನ ನಡೆದಿದೆ. ಟ್ವಿಟ್ಟರ್ ಅಭಿಯಾನ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಟ್ರೆಂಡ್ ಆಗುವ ಮಟ್ಟಿಗೆ ವಿಸ್ತಾರಗೊಂಡಿದೆ.
ಶೂ ಲೇಸ್ ಮೇಲೆ “ಠಾಕೂರ್” ಎಂಬ ಸಮುದಾಯದ ಹೆಸರನ್ನು ಮುದ್ರಿಸಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆಕ್ಷೇಪಿಸಿದ್ದರು. ಅಂದಿನಿಂದ ಕಂಪನಿಯ ಮಾಲೀಕರಿಗೆ ಕರೆಗಳ ಸರಮಾಲೆಯೇ ಹರಿದು ಬರುತ್ತಿದೆ. ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. “1954 ರಲ್ಲಿ ನನ್ನ ಅಜ್ಜ ಠಾಕೂರ್ ದಾಸ್ ತ್ರಿಲೋಕಿನಿ ಅವರು “ಠಾಕೂರ್ ಚಪ್ಪಲ್” ಎಂಬ ಅಂಗಡಿಯನ್ನು ತೆರೆದರು. ಅದೊಂದು ಸಮುದಾಯದ ಹೆಸರಲ್ಲ. ಆಗ್ರಾ ಕೋಟೆ ರೈಲ್ವೆ ನಿಲ್ದಾಣದ ಬಳಿ ಇನ್ನೂ ಆ ಅಂಗಡಿ ಇದೆ”ಎನ್ನುತ್ತಾರೆ ಮಾಲೀಕ ನರೇಂದ್ರ ತ್ರಿಲೋಕಿನಿ.
1980 ರ ನಂತರ ಪಾರ್ಟ್ನರ್ ಶಿಪ್ ನಲ್ಲಿ ಠಾಕೂರ್ ಚಪ್ಪಲ್ ನಡೆಯುತ್ತಿತ್ತು. 10 ವರ್ಷದ ಹಿಂದೆ ನಮ್ಮ ತಂದೆ ಠಾಕೂರ್ ಚಪ್ಪಲ್ ಎಂದು ಬರೆಯುವುದನ್ನು ನಿಲ್ಲಿಸಿ ಠಾಕೂರ್ ಫುಟ್ ವೇರ್ ಕಂಪನಿ (ಟಿ ಎಫ್ ಸಿ) ಎಂದು ಹೆಸರು ಜಾರಿಗೆ ತಂದರು. ಆದರೆ, ಈಗ ಮಂಗಳವಾರದಿಂದ ತುಂಬಾ ಕರೆಗಳು ಬರುತ್ತಿವೆ. ಜನ ಎಫ್ಐಆರ್ ದಾಖಲಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ನರೇಂದ್ರ ತ್ರಿಲೋಕಿನಿ ಆತಂಕ ವ್ಯಕ್ತಪಡಿಸಿದ್ದಾರೆ.