ಮೊರಾದಾಬಾದ್: ಉತ್ತರಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಟೆರೇಸ್ ನಿಂದ ಯುವತಿಯನ್ನು ಕೆಳಕ್ಕೆ ತಳ್ಳಿದ್ದಾನೆ.
ಸೋಮವಾರ ತಡರಾತ್ರಿ ಘಟನೆ ನಡೆದಿದೆ. ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ನೆರೆಮನೆಯ ಅರವಿಂದ್ ಸಿಂಗ್ ಎಂಬಾತ ಟೆರೇಸ್ ಮೂಲಕ ಮಗಳ ಕೋಣೆಗೆ ಪ್ರವೇಶಿಸಿದ್ದಾನೆ. ಆಕೆಯನ್ನು ಟೆರೇಸ್ ಗೆ ಕರೆದೊಯ್ದು ಗನ್ ಪಾಯಿಂಟ್ ನಲ್ಲಿ ಅತ್ಯಾಚಾರ ಎಸಗಿದ್ದು, ದೂರವಾಗಲು ಯತ್ನಿಸಿದಾಗ ಟೆರೇಸ್ ನಿಂದ ತಳ್ಳಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಯುವತಿಯ ಕೂಗಾಟ ಕೇಳಿದ ಕುಟುಂಬ ಸದಸ್ಯರು ಹೊರಗೆ ಓಡಿ ಬಂದಿದ್ದಾರೆ. ಕೆಳಗೆ ನಿತ್ರಾಣವಾಗಿ ಬಿದ್ದಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಬೆನ್ನೆಲುಬು ಮುರಿದು ಗಂಭೀರ ಸ್ಥಿತಿಯಲ್ಲಿದ್ದಾಳೆ. ತಲೆ, ದೇಹದ ಭಾಗಳಿಗೆ ಗಾಯಗಳಾಗಿವೆ. ಜಿಲ್ಲಾಸ್ಪತ್ರೆ ವೈದ್ಯರು ಮೀರತ್ ನ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ ಎಂದು ಸಂತ್ರಸ್ತೆ ಸಹೋದರ ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.