ಬಾಲಿವುಡ್ ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ಸ್ವಪ್ನಿಲ್ ಶಿಂಧೆ ಜನರಿಗೆ ಶಾಕ್ ನೀಡಿದ್ದಾರೆ. ಸ್ವಪ್ನಿಲ್ ಶಿಂಧೆ ಲಿಂಗ ಬದಲಿಸಿಕೊಂಡಿದ್ದಾರೆ. ಭಾವನಾತ್ಮಕ ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲಿಂಗ ಪರಿವರ್ತನೆ ನಂತ್ರ ಸ್ವಪ್ನಿಲ್ ಹೆಸರು ಬದಲಿಸಿಕೊಂಡಿದ್ದಾರೆ. ಈಗ ಸೈಶಾ ಶಿಂಧೆ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ, ಹಿನಾ ಖಾನ್, ಶ್ರದ್ಧಾ ಕಪೂರ್, ಸನ್ನಿ ಲಿಯೋನ್ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ಬಾಲಿವುಡ್ ಖ್ಯಾತನಾಮರಿಗೆ ಸ್ವಪ್ನಿಲ್ ಶಿಂಧೆ ಬಟ್ಟೆ ವಿನ್ಯಾಸಗೊಳಿಸುತ್ತಿದ್ದಾರೆ. ಸೈಶಾ ಎಂದ್ರೆ ಸಾರ್ಥಕ ಜೀವನ ಎಂದರ್ಥ. ನಾನು ನನ್ನ ಜೀವನವನ್ನು ಸಾರ್ಥಕಗೊಳಿಸಲು ಬಯಸಿದ್ದೇನೆಂದು ಸೈಶಾ ಹೇಳಿದ್ದಾರೆ. ಮೊದಲು ಗಂಡಾಗಿದ್ದ ಸ್ವಪ್ನಲ್ ಈಗ ಸೈಶಾ ಆಗಿ ಬದಲಾಗಿದ್ದಾರೆ.
ಶಾಲೆ ದಿನಗಳಲ್ಲಿ ಹುಡುಗರು ನನಗೆ ಹಿಂಸೆ ನೀಡ್ತಿದ್ದರು. ನಾನು ಅವರಿಗಿಂತ ಭಿನ್ನವಾಗಿದ್ದೆ. ಆಂತರಿಕ ನೋವು ತುಂಬಾ ಅಪಾಯಕಾರಿ. ನಾನು ಇಲ್ಲಿಯವರೆಗೆ ಉಸಿರುಗಟ್ಟಿದ ಜೀವನ ನಡೆಸುತ್ತಿದ್ದೆ. ಸಮಾಜಕ್ಕಾಗಿ ನಾನು ನಾನಲ್ಲದ ಜೀವನ ನಡೆಸಿದ್ದೆ ಎಂದು ಸೈಶಾ ಬರೆದುಕೊಂಡಿದ್ದಾರೆ.
ನನಗೆ 20ನೇ ವರ್ಷದಲ್ಲಿರುವಾಗ್ಲೇ ಬದಲಾವಣೆ ತಿಳಿದಿತ್ತು. ಅದನ್ನು ಒಪ್ಪಿಕೊಂಡಿದ್ದೆ. ಕೆಲ ವರ್ಷಗಳಿಂದ ನಾನು ಪುರುಷರತ್ತ ಆಕರ್ಷಿತನಾಗಿದ್ದೆ. ಆರು ವರ್ಷಗಳ ಹಿಂದೆ ಸತ್ಯವನ್ನು ಒಪ್ಪಿಕೊಂಡೆ. ನಾನು ಸಲಿಂಗಕಾಮಿಯಲ್ಲ. ನಾನು ಲಿಂಗ ಬದಲಿಸಿಕೊಂಡ ಮಹಿಳೆ ಎಂದು ಸೈಶಾ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡೂ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮನ್ನು ಬೆಂಬಲಿಸಿದ ಕುಟುಂಬಸ್ಥರು, ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.