ನವದೆಹಲಿ: ಭಾರತದ ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಬಳಕೆಗೆ ತಡೆ ನೀಡಬೇಕು ಎಂಬ ಅರ್ಜಿದಾರರೊಬ್ಬರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಪಿಐಎಲ್ ಅನ್ನು ತಿರಸ್ಕರಿಸಿದೆ.
ತಮಿಳುನಾಡು ಕನ್ಯಾಕುಮಾರಿ ಮೂಲದ ವಕೀಲ ಜೆ.ಆರ್. ಜಯಸುಖಿನ್, ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಅನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಡೆ, ಎ.ಎಸ್. ಭೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣ್ಯನ್ ಅವರಿದ್ದ ಪೀಠ, ಅರ್ಜಿಯನ್ನು ವಾಪಸ್ ಪಡೆಯುವಂತೆ ವಕೀಲರಿಗೆ ಸೂಚಿಸಿತು. ಕೆಲ ಕಾಲ ವಾದ ಮಾಡಿದ ಅರ್ಜಿದಾರರ ಪರ ವಕೀಲ ಕೊನೆಗೂ ಅರ್ಜಿಯನ್ನು ವಾಪಸ್ ಪಡೆದರು. ಮತ್ತು ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಅಭಿವೃದ್ಧಿ ಹೊಂದಿದ ಅಮೆರಿಕಾ, ಜರ್ಮನಿ, ಜಪಾನ್ ಮುಂತಾದ ರಾಷ್ಟ್ರಗಳು ಚುನಾವಣೆಗೆ ಇವಿಎಂ ಬಳಕೆಯನ್ನು ನಿರಾಕರಿಸಿವೆ. ಅದು ಸಮಪರ್ಕಕವಾದ ಚುನಾವಣಾ ವಿಧಾನವಲ್ಲ. ಮತ ಹಾಕುವುದು ಪ್ರಜೆಯ ಮೂಲಭೂತ ಹಕ್ಕು. ನಿರಂತರ ಇವಿಎಂ ಬಳಕೆಯಿಂದ ಹಕ್ಕಿನ ದಮನವಾಗುತ್ತದೆ ಎಂದು ಅರ್ಜಿದಾರ ವಾದ ಮಂಡಿಸಿದ್ದರು. ವಾದಗಳನ್ನು ಆಲಿಸಿದ ಪೀಠವು ಕೊನೆಗೆ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು.