ಆರೋಗ್ಯವಂತ ಮಗಳಿಗೆ ಆಕೆಯ ಆರೋಗ್ಯ ಸರಿ ಇಲ್ಲವೆಂದು ಪದೇ ಪದೇ ಸುಳ್ಳು ಹೇಳುತ್ತಲೇ ಬಂದ ಆಕೆಯ ತಾಯಿ ಆಕೆಯನ್ನು ಎಂಟು ವರ್ಷಗಳ ಕಾಲ ಗಾಲಿ ಕುರ್ಚಿ ಮೇಲೆ ಕಾಲ ಕಳೆಯುವಂತೆ ಮಾಡಿರುವ ಶಾಕಿಂಗ್ ಘಟನೆಯೊಂದು ಬ್ರಿಟನ್ನಲ್ಲಿ ಜರುಗಿದೆ.
ಫಿಟ್ಸ್ನಿಂದ ಬಳುತ್ತಿರುವೆ ಎಂದು ತನ್ನ 12 ವರ್ಷದ ಮಗಳಿಗೆ ಸುಳ್ಳು ಹೇಳಿದ ತಾಯಿ, ಆಕೆಗೆ ತಿನ್ನಲು ಹಾಗೂ ಕುಡಿಯಲು ಆಗುವುದಿಲ್ಲವೆಂದು ನಂಬಿಸಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ದುಗಳು ಟ್ರೀಟ್ಮೆಂಟ್ ಹಾಗೂ ಗಾಲಿ ಕುರ್ಚಿಯ ಮೇಲೆ ಆಕೆ ಕಾಲ ಕಳೆಯುವಂತೆ ಮಾಡಿದ್ದಾಳೆ. ಈ ಬಾಲಕಿ ತನ್ನ ಶಾಲೆಗೂ ಸಹ ಗಾಲಿ ಕುರ್ಚಿಯ ಮೇಲೇ ಹೋಗಬೇಕಾಗಿ ಬಂದಿತ್ತು.
ತನ್ನ ಮಗಳ ಅನಾರೋಗ್ಯದ ಕುರಿತಂತೆ ವೈದ್ಯರಿಗೆ ಮಾಹಿತಿ ನೀಡುವ ವೇಳೆಯೂ ಮನಬಂದಂತೆ ಸಿಕ್ಕ ಸಿಕ್ಕ ಸಮಸ್ಯೆಯೆಲ್ಲಾ ಇರುವುದಾಗಿ ಈ ಮಹಾತಾಯಿ ಹೇಳಿರುವುದಾಗಿ ನ್ಯಾಯಾಂಗ ತನಿಖೆ ವೇಳೆ ಸಾಬೀತಾಗಿದ್ದು, ಆ ಬಾಲಕಿಗೆ 2012ರಿಂದಲೂ ಈ ಚಿತ್ರಹಿಂಸೆ ಕೊಟ್ಟಿರುವುದು ಕಂಡು ಬಂದಿದೆ. 2017ರಲ್ಲಿ ಈ ಹುಡುಗಿಯನ್ನು ವಿಶೇಷ ಪಥ್ಯಕ್ಕೆ ಒಳಪಡಿಸಿದ್ದಲ್ಲದೇ, ಕೃತಕ ಫೀಡಿಂಗ್ ಟ್ಯೂಬ್ನಲ್ಲಿ ಇರಿಸಲಾಗಿತ್ತು.
2019ರ ಅಕ್ಟೋಬರ್ನಲ್ಲಿ ಬಾಲಕಿಯನ್ನು ಆಕೆಯ ತಾಯಿಂದ ಬಿಡಿಸಿದ ಸಾಮಾಜಿಕ ಕಾರ್ಯಕರ್ತರಿಗೆ ಆಕೆ ಆರೋಗ್ಯವಾಗಿ ಇದ್ದಾಳೆ ಎಂಬುದು ಖಾತ್ರಿಯಾಗಿದೆ. ವಿಚ್ಛೇದನ ಪ್ರಕ್ರಿಯೆಯ ವೇಳೆ ಈ ತಾಯಿ ತನ್ನ ಮಗಳಿಗೆ ಹೀಗೆ ಮಾಡಿರುವುದಾಗಿ ತಿಳಿಸಿದ ಲಂಡನ್ನ ಕೋರ್ಟ್ ಒಂದರ ನ್ಯಾಯಾಧೀಶೆ ಜೂಡ್, ತನ್ನ ಮಗಳು ಆರೋಗ್ಯವಾಗಿದ್ದಾಳೆ ಎಂದು ಒಪ್ಪಿಕೊಂಡಲ್ಲಿ ಆಕೆಯನ್ನು ಮರಳಿ ಕಳುಹಿಸಿಕೊಡಲಾಗುವುದು ಎಂದು ಆ ತಾಯಿಗೆ ಆದೇಶ ನೀಡಿದ್ದಾರೆ.