ಭಾರತೀಯ ಕ್ರಿಕೆಟ್ ತಂಡ ಮಾಜಿ ನಾಯಕ ಸೌರವ್ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾದ ಬೆನ್ನಲ್ಲೇ ಫಾರ್ಚ್ಯೂನ್ ರೇಸ್ ಬ್ರೇನ್ ಅಡುಗೆ ಎಣ್ಣೆ ಜಾಹೀರಾತು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಸೌರವ್ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ಅಭಿನಯಿಸಿದ್ದ ಜಾಹೀರಾತು ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಜಾಹೀರಾತಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಸಂಸ್ಥೆಯ ಮಾಲಿಕ ಅದಾನಿ ವಿಲ್ಮರ್ ಈ ಕುರಿತು ಪ್ರಕಟಿಸಿದ್ದು, ಟಿವಿ ಚಾನಲ್ ಗಳಲ್ಲಿ ವಾಣಿಜ್ಯ ಉದ್ದೇಶಿತ ಜಾಹೀರಾತು ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆಯೇ ಹೊರತು, ಮತ್ತೇನೂ ಇಲ್ಲ ಎಂದಿದ್ದಾರೆ.
ಗಂಗೂಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರೊಂದಿಗೆ ಕುಳಿತು ಮಾತನಾಡುತ್ತೇವೆ. ಇದು ಅಡುಗೆ ಎಣ್ಣೆಯೇ ವಿನಃ ಔಷಧಿಯಲ್ಲ. ಜಗತ್ತಿನ ಆರೋಗ್ಯಕರ ಅಡುಗೆ ಎಣ್ಣೆಗಳಲ್ಲಿ ಇದೂ ಒಂದು. ದೇಹದ ಅನಪೇಕ್ಷಿತ ಕೊಬ್ಬಿನ ಪ್ರಮಾಣ ಕಡಿಮೆ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನ ಹೊಂದಿದೆ ಎಂದು ಪುನರುಚ್ಛರಿಸಿದ್ದಾರೆ.