ಇಸ್ರೋದ ಪ್ರಮುಖ ವಿಜ್ಞಾನಿ ತಮಗೆ 2017ರಲ್ಲಿ ವಿಷವುಣಿಸಲಾಗಿತ್ತು ಎಂಬ ಆಘಾತಕಾರಿ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ಫೇಸ್ಬುಕ್ನಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ವಿಜ್ಞಾನಿ ತಪನ್ ಮಿಶ್ರಾ ತಮಗೆ 2017ರ ಮೇ 23ರಂದು ಅರ್ಸೆನಿಕ್ ಟ್ರೈ ಆಕ್ಸೈಡ್ ನ್ನು ಪಿತೂರಿಯಿಂದ ನೀಡಿದ್ದರು ಎಂದು ಆರೋಪಿಸಿದ್ದಾರೆ. ಇಸ್ರೋ ಮುಖ್ಯ ಕಚೇರಿಯಲ್ಲಿ ನಡೆಯುತ್ತಿದ್ದ ಸಂದರ್ಶನದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ನನಗೆ ವಿಷವುಣಿಸಲಾಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.
ಬಹುಶಃ ದೋಸಾ ಹಾಗೂ ಚಟ್ನಿಯ ಜೊತೆ ಈ ವಿಷವನ್ನ ಮಿಶ್ರಣ ಮಾಡಲಾಗಿತ್ತು ಎಂದು ತಪನ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ತಪನ್ ಮಿಶ್ರಾ ಇಸ್ರೋದಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಇಸ್ರೋದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ದೀರ್ಘ ಕಾಲದ ರಹಸ್ಯ ಎಂಬ ಶೀರ್ಷಿಕೆಯ ಮೂಲಕ ಫೇಸ್ಬುಕ್ನಲ್ಲಿ ಈ ವಿಚಾರವನ್ನ ಮಿಶ್ರಾ ಬಹಿರಂಗಪಡಿಸಿದ್ದಾರೆ. ಗೃಹ ಇಲಾಖೆ ನನ್ನನ್ನ ವೈಯಕ್ತಿಕವಾಗಿ ಭೇಟಿ ಮಾಡಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿತು. ಈ ಘಟನೆ ಬಳಿಕ ನನ್ನ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾದವು. ಉಸಿರಾಟದ ಸಮಸ್ಯೆ, ಚರ್ಮದ ಸಮಸ್ಯೆ ಹಾಗೂ ಫಂಗಸ್ ಸೋಂಕಿನಿಂದ ಬಳಲಿದ್ದೇನೆ ಎಂದಿದ್ದಾರೆ. ಇದೊಂದು ಗೂಢಚರ್ಯ ಕಾರ್ಯ ಎಂದು ಮಿಶ್ರಾ ಶಂಕಿಸಿದ್ದಾರೆ.