ನವದೆಹಲಿ: 2021 ರ ಆರಂಭದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಭಾರೀ ಶುಭ ಸುದ್ದಿಯೊಂದು ಸಿಕ್ಕಿದೆ. ಜನವರಿ 2021 ರಿಂದ ಅನ್ವಯವಾಗುವಂತೆ, ಕೇಂದ್ರ ಸರ್ಕಾರೀ ನೌಕರರ ತುಟ್ಟಿ ಭತ್ಯೆಯಲ್ಲಿ ಶೇಕಡ 4 ರಷ್ಟು ಏರಿಕೆ ಮಾಡುವುದಾಗಿ ವರದಿಗಳು ಹರಿದಾಡುತ್ತಿವೆ.
7ನೇ ಕೇಂದ್ರ ವೇತನಾ ಆಯೋಗದ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ. 2020 ರ ಮಾರ್ಚ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಪುಟ ಸಭೆಯಲ್ಲಿ, ಜನವರಿ 2021 ರಿಂದ ಅನ್ವಯವಾಗುವಂತೆ ಈ ಹೆಚ್ಚಳವನ್ನು ತರಲು ನಿರ್ಧರಿಸಲಾಗಿತ್ತು. ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಮೂಲ ವೇತನದ 17%ನಷ್ಟು ಇರಲಿರುವ ತುಟ್ಟಿ ಭತ್ಯೆಯಲ್ಲಿ 4%ನಷ್ಟು ಏರಿಕೆ ಮಾಡಲಾಗುವುದು.
ಪಿಂಚಣಿದಾರರ ತುಟ್ಟಿ ನಿರಾಳತೆಯ ಮೇಲೂ ಸಹ ಈ ಕ್ರಮ ಅನ್ವಯವಾಗುತ್ತದೆ. ದೇಶಾದ್ಯಂತ ಇರುವ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರು ಈ ಕ್ರಮದಿಂದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸದ ಮೇಲೆ ಪ್ರತಿ ವರ್ಷ ಹೆಚ್ಚುವರಿಯಾಗಿ 12,510 ಕೋಟಿ ರೂಗಳ ಹೊರೆ ಬೀಳಲಿದೆ.
ಇದೇ ವೇಳೆ ಹಾಲಿ ಕೆಲಸದಲ್ಲಿರುವ ನೌಕರರು ಕರ್ತವ್ಯದ ಅವಧಿಯಲ್ಲಿ ಏನಾದರೂ ಅಫಘಾತ ಸಂಭವಿಸಿ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಅವರಿಗೆ ’ಅಂಗವೈಕಲ್ಯ ಪರಿಹಾರ’ವನ್ನು ನೀಡಲು ಕಳೆದ ವಾರ ಮೋದಿ ಸರ್ಕಾರ ನಿರ್ಧರಿಸಿತ್ತು.
ಈ ಆದೇಶದಿಂದ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳಾದ ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಫ್ನ ಯೋಧರಿಗೆ ದೊಡ್ಡ ನಿರಾಳತೆ ಮೂಡಿದೆ.