ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮವನ್ನ ಉಲ್ಲಂಘನೆ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರರಾದ ಅರ್ಬಾಜ್ ಖಾನ್, ಸೋಹೈಲ್ ಖಾನ್ ಮತ್ತವರ ಪುತ್ರ ನಿರ್ವಾನ್ ಖಾನ್ ವಿರುದ್ಧ ಬಿಎಂಸಿ ಸೋಮವಾರ ದೂರು ದಾಖಲಿಸಿದೆ.
ಖಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸಾಂಕ್ರಾಮಿಕ ಕಾಯ್ದೆ, 1987 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ.
ಬಿಎಂಸಿ ಪ್ರಕಾರ ಈ ಮೂವರು ಡಿಸೆಂಬರ್ 25ರಂದು ಯುಎಇನಿಂದ ಮರಳಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಕೊರೊನಾ ಮಾರ್ಗಸೂಚಿಗಳ ಪ್ರಕಾರ ಈ ಮೂವರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕಿತ್ತು. ಅದರಂತೆ ಇವರು ತಾವು ಬಾಂದ್ರಾ ತಾಜ್ ವೆಸ್ಟ್ ಲ್ಯಾಂಡ್ಸ್ ಎಂಡ್ನಲ್ಲಿ 7 ದಿನಗಳ ಕಾಲ ಕ್ವಾರಂಟೈನ್ ಆಗುತ್ತೇವೆ ಎಂದು ಹೇಳಿದ್ರು. ಆದರೆ ಈಗ ಅವರು ಡಿಸೆಂಬರ್ 26ರಂದೇ ಹೋಟೆಲ್ ಬುಕ್ಕಿಂಗ್ ರದ್ದು ಮಾಡಿರುವ ಬಗ್ಗೆ ಬಿಎಂಸಿಗೆ ದಾಖಲೆಗಳು ಲಭಿಸಿದೆ.