ಕೋವಿಡ್-19 ಕಾರಣದಿಂದಾಗಿ 2020ರಲ್ಲಿ ಜಗತ್ತಿನಾದ್ಯಂತ ದೈನಂದಿನ ಜನಜೀವನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿಬಿಟ್ಟಿವೆ. ಮಾಸ್ಕ್ ಧರಿಸುವುದರಿಂದ ಹಿಡಿದು ಸ್ಯಾನಿಟೈಸರ್ ಹಾಕುವವರೆಗೂ ಎಲ್ಲವೂ ಬದಲಾಗಿದೆ.
ಈ ಅವಧಿಯಲ್ಲಿ ಸಂಭವಿಸಿದ ಕ್ರಾಂತಿಕಾರಿ ಬದಲಾವಣೆಗಳಲ್ಲಿ ಒಂದು ಡಿಜಿಟಲ್ ಪಾವತಿ. ನಗದಿನ ಬದಲಿಗೆ ಯುಪಿಐ ಮುಖಾಂತರ ಆನ್ಲೈನ್ ವಹಿವಾಟು ನಡೆಸಲು ಜನರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಾಂಕ್ರಮಿಕ ಕಾಲಘಟ್ಟದಲ್ಲಿ ಸುರಕ್ಷಿತವಾದ ವಹಿವಾಟು ನಡೆಸಲು ಮುಂದಾದ ಜನರಿಗೆ ಡಿಜಿಟಲ್ ಪಾವತಿ ಮೂಲಕ ಕ್ಯಾಶ್‌ಬ್ಯಾಕ್‌ನಂಥ ಆಫರ್‌ಗಳೂ ಸಹ ಹೆಚ್ಚು ಒಪ್ಪಿತವಾಗಿಬಿಟ್ಟಿವೆ.
ಎನ್‌ಪಿಸಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2020ರಲ್ಲಿ ಯುಪಿಐ ವ್ಯವಹಾರಗಳ ಸಂಖ್ಯೆಯಲ್ಲಿ 103% ಏರಿಕೆ ದಾಖಲಾಗಿದೆ. 2019ರಲ್ಲಿ ಡಿಜಿಟಲ್ ವಹಿವಾಟಿನ ಮೂಲಕ ಭಾರತೀಯರು 2 ಲಕ್ಷದ 2 ಸಾವಿರ ಕೋಟಿ ರೂ.ಗಳಷ್ಟು ವ್ಯವಹಾರ ಮಾಡಿದ್ದರೆ 2020ರಲ್ಲಿ 4 ಲಕ್ಷದ 16 ಸಾವಿರ ಕೋಟಿ ರೂ.ಗಳಷ್ಟು ಡಿಜಿಟಲ್ ವಹಿವಾಟು ಮಾಡಿದ್ದಾರೆ.