ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಇಲ್ಲಿದೆ. 2021 ರ ಜನವರಿಯಲ್ಲಿ ನಿರೀಕ್ಷಿಸಲಾಗಿರುವ ಡಿಎ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶೇಕಡ 4 ರಷ್ಟು ಡಿಎ ಹೆಚ್ಚಳ ನಿರೀಕ್ಷಿಸಲಾಗಿದೆ.
7 ನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ಡಿಎ ಹೆಚ್ಚಳವಾಗಲಿದ್ದು, ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 2020 ರ ಮಾರ್ಚ್ ನಲ್ಲಿ ನಡೆದಿದ್ದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ ಕಂತನ್ನು ಪಿಂಚಣಿದಾರರು ಮತ್ತು ನೌಕರರಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿತ್ತು. ಪ್ರಸ್ತುತ 4ರಷ್ಟು ಡಿಎ ಹೆಚ್ಚಳದೊಂದಿಗೆ ಶೇಕಡ 17 ರಷ್ಟು ಏರಿಕೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು, 65.26 ಲಕ್ಷ ಪಿಂಚಣಿದಾರರಿಗೆ ಡಿಎ ಹೆಚ್ಚಳ ಸೌಲಭ್ಯ ಸಿಗಲಿದೆ. ಇದರಿಂದ 2020 – 21 ನೇ ಆರ್ಥಿಕ ವರ್ಷದಲ್ಲಿ 14,595.04 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.