ನವದೆಹಲಿ: ಮಧ್ಯಪ್ರದೇಶದ ಇಂದೋರ್ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಹೈಅಲರ್ಟ್ ಘೋಷಿಸಿದೆ.
ರಾಜಸ್ಥಾನದ ಅನೇಕ ಪ್ರದೇಶದಲ್ಲಿ ಕಾಗೆಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಆತಂಕ ಸೃಷ್ಟಿಸಿದೆ. ರಾಜಸ್ಥಾನ ಪಶು ಸಂಗೋಪನಾ ಇಲಾಖೆ ಸಚಿವ ಲಾಲ್ ಚಂದ್ ಕಟಾರಿಯಾ ಅಧಿಕಾರಿಗಳ ಸಭೆ ನಡೆಸಿ ಕೂಡಲೇ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನ ಡಾಲಿ ಕಾಲೇಜ್ ಕ್ಯಾಂಪಸ್ ನಲ್ಲಿ ಕಾಗೆಗಳು ಮೃತಪಟ್ಟ ನಂತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ರಾಜಸ್ಥಾನದ ಜೋಧ್ ಪುರದಲ್ಲಿ 152, ಜಾಲ್ವಾರ್ ನಲ್ಲಿ 100, ಜೈಪುರದಲ್ಲಿ 70 ಹಾಗೂ ಕೋಟಾದಲ್ಲಿ 47 ಕಾಗೆಗಳು ಮೃತಪಟ್ಟಿದ್ದು, ಇವುಗಳಲ್ಲಿ ಹೆಚ್5ಎನ್8 ವೈರಸ್ ಪತ್ತೆಯಾಗಿದ್ದು ಇವುಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಆರು ಅಡಿ ಆಳದ ಗುಂಡಿಯಲ್ಲಿ ಹೂಳಲಾಗಿದೆ. ಕೇಂದ್ರ ಸರ್ಕಾರದಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದ್ದು ಹೈಅಲರ್ಟ್ ಘೋಷಿಸಲಾಗಿದೆ ಎನ್ನಲಾಗಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ 1400 ವಲಸೆ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಆತಂಕ ಮೂಡಿದೆ. ಪಾಂಗ್ ಡ್ಯಾಮ್ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿಗಳು, ಕಪ್ಪು ತಲೆಯ ಗಾವಿಲ, ರಿವರ್ಟನ್, ಹೆಬ್ಬಾತುಕೋಳಿ ಸೇರಿ ಅನೇಕ ಪಕ್ಷಿಗಳು ಮೃತಪಟ್ಟಿವೆ.
ಬರೇಲಿಯ ಭಾರತೀಯ ಪ್ರಾಣಿ ಸಂಶೋಧನಾ ಸಂಸ್ಥೆ ಮತ್ತು ಜಲಂಧರ್ ನ ಪ್ರಾದೇಶಿಕ ರೋಗ ನಿಯಂತ್ರಣ ಪ್ರಯೋಗಾಲಯಕ್ಕೆ ಪಕ್ಷಿಗಳ ಮೃತದೇಹದ ಮಾದರಿಯನ್ನು ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ವಿಷಮಿಶ್ರಿತ ಆಹಾರ ಸೇವಿಸಿ ಪಕ್ಷಿಗಳು ಮೃತಪಟ್ಟಿಲ್ಲ ಎನ್ನುವುದು ಗೊತ್ತಾಗಿದೆ. ಪ್ರಯೋಗಾಲಯದ ವರದಿಗೆ ಕಾಯಲಾಗುತ್ತಿದೆ. ಈ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.