ಪ್ರಸ್ತುತ ಭಾರತದಲ್ಲಿ ವಿವಾಹದ ವಯೋಮಿತಿ ಪುರುಷರಿಗೆ 21 ವರ್ಷ ಹಾಗೂ ಮಹಿಳೆಯರಿಗೆ 18 ವರ್ಷ ತುಂಬಿರಬೇಕೆಂದು ನಿಗದಿಪಡಿಸಲಾಗಿದೆ. ಇದರ ಮಧ್ಯೆ ಆದಿವಾಸಿಗಳ ವಿವಾಹ ವಯೋಮಿತಿಯನ್ನು ಇಳಿಕೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಕುರಿತು ಇದೇ ತಿಂಗಳಿನಲ್ಲಿ ಆದಿವಾಸಿಗಳ ಪಾರ್ಲಿಮೆಂಟ್ ನಡೆಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಆದಿವಾಸಿಗಳ ಸರಾಸರಿ ಜೀವಿತಾವಧಿ ಸಾಮಾನ್ಯರಿಗಿಂತ ಕಡಿಮೆ ಎನ್ನಲಾಗಿದ್ದು, ಅಲ್ಲದೆ ಜೀವನಕ್ರಮ ಹಾಗೂ ವಂಶವಾಹಿನಿ ಕಾರಣಕ್ಕೆ ಅವರುಗಳು ಬಹುಬೇಗನೇ ಪ್ರೌಢಾವಸ್ಥೆಗೆ ಬರುತ್ತಾರೆ ಎನ್ನಲಾಗಿದೆ. ಜೊತೆಗೆ ಅವರುಗಳ ಸರಾಸರಿ ಜೀವಿತಾವಧಿ 55ರಿಂದ 60 ವರ್ಷ ಮಾತ್ರ ಎಂದು ಹೇಳಲಾಗಿದೆ.
ಹೀಗಾಗಿ ಆದಿವಾಸಿ ಯುವಕರ ವಿವಾಹ ವಯೋಮಿತಿಯನ್ನು 18 ಕ್ಕೆ ಹಾಗೂ ಯುವತಿಯರ ವಯೋಮಿತಿಯನ್ನು 16ಕ್ಕೆ ನಿಗದಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಪ್ರಸ್ತುತ ಇರುವ ಕಾನೂನಿನಿಂದಾಗಿ ನಿಗದಿಪಡಿಸಿದ ವಯೋಮಿತಿ ಮೀರಿ ವಿವಾಹವಾದ ಕಾರಣಕ್ಕೆ ಆದಿವಾಸಿ ಜನಾಂಗದ ಹಲವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಆದಿವಾಸಿಗಳ ವಿವಾಹ ವಯೋಮಿತಿಯನ್ನು ಇಳಿಕೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.