ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನ ಕಳೆದರೂ ಸಂಘರ್ಷ ಮುಂದುವರೆದಿದೆ. ಸೋತ ಗುಂಪಿನಿಂದ ಹಲ್ಲೆಗೆ ಒಳಗಾದ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನಡೆದಿದೆ.
ಮಿನಿಗರಹಳ್ಳಿ ಗ್ರಾಮದಲ್ಲಿ ಸೋತ ಗುಂಪಿನ ಕಡೆಯವರು ನಿವೃತ್ತ ಶಿಕ್ಷಕ ಕೃಷ್ಣಪ್ಪ(68) ಅವರ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ಕೃಷ್ಣಪ್ಪ ಅವರ ಸಂಬಂಧಿ ಜಯಗಳಿಸಿದ್ದು, ಇದನ್ನು ಸಹಿಸದೆ ಎದುರಾಳಿ ಗುಂಪಿನವರು ಜಗಳವಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಗಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.