
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಮದುವೆ ಹೊತ್ತಲ್ಲೇ ವರ ನಾಪತ್ತೆಯಾಗಿದ್ದು, ಅತಿಥಿಯಾಗಿ ಬಂದಿದ್ದ ವ್ಯಕ್ತಿ ವರನಾದ ಘಟನೆ ನಡೆದಿದೆ.
ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಸಹೋದರರಿಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ಹೆಣ್ಣು ತರಲಾಗಿತ್ತು. ಅಶೋಕ್ ಮದುವೆ ಭದ್ರಾವತಿಯ ಯುವತಿಯೊಂದಿಗೆ ನೆರವೇರಿದ್ದು, ನವೀನ್ ಮದುವೆಯಾಗಬೇಕಿದ್ದ ಹೊಸದುರ್ಗ ತಾಲ್ಲೂಕಿನ ಯುವತಿಯನ್ನು ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಚಂದ್ರು ಮದುವೆಯಾಗಿದ್ದಾರೆ.
ನವೀನ್ ಶನಿವಾರ ರಾತ್ರಿ ರಿಸೆಪ್ಷನ್ ನಲ್ಲಿ ಭಾಗಿಯಾಗಿದ್ದು ಭಾನುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಆತ ಪ್ರೀತಿಸಿದ ಹುಡುಗಿ ಮದುವೆಯಾಗಲು ಬಿಡುವುದಿಲ್ಲ. ಛತ್ರದಲ್ಲಿ ವಿಷ ಕುಡಿಯುವುದಾಗಿ ಬೆದರಿಸಿದ್ದರಿಂದ ನವೀನ್ ಮರ್ಯಾದೆಗೆ ಹೆದರಿ ಛತ್ರದಿಂದ ನಾಪತ್ತೆಯಾಗಿ ತುಮಕೂರಿಗೆ ತೆರಳಿದ್ದು, ತಾನು ಪ್ರೀತಿಸಿದ ಹುಡುಗಿಯೊಂದಿಗೆ ಹೋಗಿದ್ದರಿಂದ ನಡೆಯಬೇಕಿದ್ದ ಮದುವೆ ನಿಂತಿದೆ.
ಮದುವೆಗೆ ಬಂದಿದ್ದ ಕಂಡಕ್ಟರ್ ಚಂದ್ರು ಬಂಧು, ಬಾಂಧವರೊಂದಿಗೆ ಮಾತನಾಡಿ, ಹುಡುಗಿ ಒಪ್ಪಿದರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಕುಟುಂಬದವರ ಮನವೊಲಿಸಿ ಮದುವೆ ನೆರವೇರಿಸಲಾಗಿದೆ ಎಂದು ಹೇಳಲಾಗಿದೆ.