ಕೇಂದ್ರ ಸರ್ಕಾರ ತಂದಿರುವ ಕೃಷಿ ಸಂಬಂಧಿ ನೂತನ ಕಾಯಿದೆಗಳ ವಿರುದ್ಧ ಪಂಜಾಬ್ ರೈತರ ಪ್ರತಿಭಟನೆ ಇನ್ನೂ ಚಾಲ್ತಿಯಲ್ಲಿದ್ದು, ಮಾಧ್ಯಮಗಳು ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯಿಂದ ಥರಾವರಿ ಸುದ್ದಿಗಳನ್ನು ಬಿತ್ತರಿಸುತ್ತಲೇ ಇವೆ.
ಜಲಂಧರ್ನ ಹರ್ಪೀತ್ ಸಿಂಗ್ ಮಟ್ಟು ಹೆಸರಿನ ರೈತರೊಬ್ಬರು ತಮ್ಮ ಕಂಟೇನರ್ ಟ್ರಕ್ ಅನ್ನೇ ತಾತ್ಕಾಲಿಕ ಮನೆಯನ್ನಾಗಿ ಮಾರ್ಪಡು ಮಾಡಿಕೊಂಡಿದ್ದಾರೆ. ಅವರ ಈ ತಾತ್ಕಾಲಿಕ ಮನೆಯಲ್ಲಿ ಸೋಫಾ, ಹಾಸಿಗೆ, ಟಿವಿ, ಶೌಚಾಲಯ ಸೇರಿದಂತೆ ಸಕಲ ಸೌಲಭ್ಯಗಳೂ ಇವೆ. ಒಂದೂವರೆ ದಿನಗಳ ಅವಧಿಯಲ್ಲಿ ಕಟ್ಟಿಕೊಂಡ ತಮ್ಮ ಈ ತಾತ್ಕಾಲಿಕ ಮನೆಯನ್ನು ನಿರ್ಮಿಸಲು ಸ್ನೇಹಿತರು ಸಹಾಯ ಮಾಡಿದ್ದಾಗಿ ಹರ್ಪೀತ್ ಸಿಂಗ್ ತಿಳಿಸಿದ್ದಾರೆ.
“ನಾನು ಈ ಜಾಗಕ್ಕೆ ಡಿಸೆಂಬರ್ 2ರಂದು ಆಗಮಿಸಿದ್ದೇನೆ. ಅಮೆರಿಕದಲ್ಲಿರುವ ನನ್ನ ಸಹೋದರನ ಪರವಾಗಿ ನಾನು ರೈತರ ಸೇವೆ ಮಾಡಲೆಂದು ಬಂದಿರುವೆ. ನನ್ನ ಎಲ್ಲ ಕೆಲಸವನ್ನೂ ಬಿಟ್ಟು ಸಿಂಘು ಗಡಿಯಲ್ಲಿ ರೈತರ ಸೇವೆ ಮಾಡಿದೆ. ಅದಕ್ಕೂ ಮೊದಲು ನನ್ನದೇ ಐದು ಟ್ರಕ್ಗಳು ಇಲ್ಲಿಗೆ ಬಂದಿದ್ದವು. ಬಹಳ ದಿನಗಳು ಇಲ್ಲಿದ್ದ ಕಾರಣ ಹೋಂಸಿಕ್ನೆಸ್ ಕಾಡಿ, ಈ ತಾತ್ಕಾಲಿಕ ಮನೆ ಮಾಡಿಕೊಂಡಿರುವೆ” ಎಂದು ಹರ್ಪೀತ್ ಸಿಂಗ್ ವಿವರಿಸುತ್ತಾರೆ.