ಮುಂಬಯಿ: ಲೋಕಲ್ ಟ್ರೈನ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಯೊಬ್ಬ ವಿರೋಧ ವ್ಯಕ್ತಪಡಿಸಿದಾಗ ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಎಸೆದ ಘಟನೆ ಜನವರಿ 1 ರಂದು ನಡೆದಿದೆ.
25 ವರ್ಷದ ಯುವತಿ ಅಂದು ಬೆಳಗ್ಗೆ 10.40 ಕ್ಕೆ ವಡಾಲದಿಂದ ಪನ್ವೆಲ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಳು. ಈ ವೇಳೆ ಲೋಕಲ್ ಟ್ರೈನ್ ನಲ್ಲಿ ಮಹಿಳಾ ಬೋಗಿಯಲ್ಲಿ ಒಬ್ಬಳೇ ಯುವತಿ ಇರುವುದನ್ನು ಗಮನಿಸಿದ ಆರೋಪಿ ಕಂಪಾರ್ಟ್ಮೆಂಟ್ ಪ್ರವೇಶಿಸಿ ಕಿರುಕುಳ ನೀಡಿದ್ದಾನೆ.
ಆಕೆ ವಿರೋಧ ವ್ಯಕ್ತಪಡಿಸಿದಾಗ ರೈಲಿಂದ ಕೆಳಗೆ ಎಸೆದಿದ್ದಾನೆ. ಗುರು ತೇಜ್ ಬಹದ್ದೂರ್ ನಿಲ್ದಾಣದ ಬಳಿ ಬಿದ್ದಿದ್ದ ಯುವತಿಯನ್ನು ರೈಲ್ವೆ ಗ್ಯಾಂಗ್ ಮೆನ್ ಗಳು ರಕ್ಷಿಸಿದ್ದಾರೆ. ಬಳಿಕ ರೈಲ್ವೇ ಕಚೇರಿಗೆ ಕರೆದುಕೊಂಡು ಹೋಗಿ ನಂತರ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸಾಗಿಸಲಾಗಿದೆ.
ರೈಲ್ವೆ ಕಾಯ್ದೆಯ ನಿಬಂಧನೆಗಳ ಹೊರತಾಗಿ ಆರೋಪಿ ವಿರುದ್ಧ ಕೊಲೆಯತ್ನ ಮತ್ತು ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಡಾಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.